ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕಣ್ಣಂಚಿನಲ್ಲಿ ನೀರು, ಗದ್ಗದಿತ ಭಾವ. ಗಂಟಲು ಕಟ್ಟಿ, ಒಂದು ಹಂತದಲ್ಲಂತೂ ಕಣ್ಣಲ್ಲಿ ಹರಿಯುವ ನೀರಿನ ಮಧ್ಯೆಯೇ ಭಾವುಕ ಮಾತುಗಳು. ನನ್ನಿಂದ ತಿಳಿದೋ ತಿಳಿಯದೆಯೋ ಏನಾದರೂ ತಪ್ಪಾಗಿದ್ದರೆ ನಿಮ್ಮವನೆಂದು ಕ್ಷಮಿಸಿ ಎಂದು ಹೇಳುವಾಗ ಕಣ್ತುಂಬಾ ನೀರು. ಏನಾದರೂ ಕೊರತೆ ಇದ್ದರೂ ಹೊಟ್ಟೆಗಾಕಿಕೊಳ್ಳಿ. ಇಷ್ಟೆಲ್ಲ ಘಟನೆಗಳು ನಡೆದಿದ್ದು ಬೀದರ್ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ.ಗುರುವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಹಾಲಿ ಎಸ್‌ಪಿ ಪ್ರದೀಪ್ ಗುಂಟೆ ಅವರಿಗೆ ಸ್ವಾಗತ ಹಾಗೂ ವರ್ಗಾವಣೆಗೊಂಡ ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವರ್ಗಾವಣೆಯಾಗಿ ಹೊರಟಿದ್ದ ಎಸ್‌ಪಿ ಚನ್ನಬಸವಣ್ಣ ಜಿಲ್ಲೆಯೊಂದಿಗೆ ಹೊಂದಿದ ನಂಟನ್ನು ಭಾವುಕರಾಗಿ ನುಡಿದಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಎಂದಾಕ್ಷಣ ಕಣ್ಣೆದುರಿಗೆ ಬರುವುದು ಗಟ್ಟಿತನ, ಗಡಸುತನ, ಬಿರು ಮಾತುಗಳು, ಗದರುವ ಧ್ವನಿ. ಆದರೆ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಈ ಚಿಂತನೆಯನ್ನೇ ಬದಲಿಸುವಂಥ ವಾತಾವರಣ ಜಿಲ್ಲಾ ಪೊಲೀಸ್ ವ್ಯವಸ್ಥೆಯಲ್ಲಿ ಬಂದಿತ್ತು. ಹಾಗಂತ ಅಪರಾಧಿಗಳಿಗೆ ದುಸ್ವಪ್ನವಾಗಿದ್ದರು. ಸಾವಿರಾರು ಕೋಟಿ ರು.ಗಳ ಆಫೀಮು, ಗುಟ್ಕಾ ಸಾಗಾಟಕ್ಕೆ ಬ್ರೇಕ್ ಹಾಕಿದ್ದರು. ಸಂಚಾರ ವ್ಯವಸ್ಥೆಗೆ, ಸಾಮರಸ್ಯ, ಸೌಹಾರ್ದತೆ ಮೂಡಿಸುವ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದರು.ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆಯಾಗಿರುವ ಎಐಜಿಪಿ ಚನ್ನಬಸವಣ್ಣ ಎಸ್‌ಎಲ್ ಮಾತನಾಡಿ, ಬೀದರ್ ಜಿಲ್ಲೆ ಶರಣರ ಸೂಫಿ ಸಂತರು, ಮಹ್ಮದ್ ಗಾವಾನ್ ನಡೆದಾಡಿದ ಭೂಮಿಯಿದೆ. ಇಂತಹ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ. ನನ್ನ ಅಧಿಕಾರಾವಧಿಯಲ್ಲಿ ಇಲ್ಲಿಯ ಜನರ ಸಹಕಾರ ನನಗೆ ಭಾವುಕನನ್ನಾಗಿ ಮಾಡಿದೆ ಎಂದು ತಿಳಿಸಿದರು.
ಭಾರತದಲ್ಲಿ ಬೀದರ್ ಇದೆ. ಆದರೆ ಬೀದರ್‌ನಲ್ಲಿ ಇಡೀ ಭಾರತವೇ ಅಡಗಿದೆ. ನಾನು ಇಲ್ಲಿಂದ ಸಂತೋಷದಿಂದ ಹೋಗುತ್ತಿದ್ದೇನೆ. ಇಲ್ಲಿ ಸಲ್ಲಿಸಿದ ಸೇವೆ ನನಗೆ ಆತ್ಮತೃಪ್ತಿ ತಂದಿದೆ ಎಂದರಲ್ಲದೆ, ತಮ್ಮ ಮಾತಿನುದ್ದಕ್ಕೂ ಬಸವಣ್ಣನವರ ವಚನ ಉಲ್ಲೇಖಿಸಿದ ಚನ್ನಬಸವಣ್ಣ ಅವರು ಅಧಿಕಾರ ಇದ್ದಾಗ ರಕ್ತಸಂಬಂಧ ಹುಡುಕಿಕೊಂಡು ಬಹಳ ಜನ ಬರುತ್ತಾರೆ. ಆದರೆ ಎಲ್ಲಕ್ಕಿಂತ ದೊಡ್ಡದು ಮಾನವೀಯ ಸಂಬಂಧ. ಹೀಗಾಗಿ ಶಿಷ್ಟ ರಕ್ಷಣೆ ದುಷ್ಟ ಶಿಕ್ಷೆ ಎಂಬುವುದು ಪೊಲೀಸರ ಬಹುದೊಡ್ಡ ಕರ್ತವ್ಯ. ಆದ್ದರಿಂದ ಆ ಕಾರ್ಯ ನಾವು ಮಾಡಿದ್ದೇವೆ ಎಂದರು.ಕಣ್ಣಂಚಲ್ಲಿ ಒಂದು ಕ್ಷಣ ನೀರು ಚಿಮ್ಮಿ, ಗಂಟಲು ಕಟ್ಟಿ, ಭಾವುಕರಾಗಿ ಗದ್ಗದಿತ:
ಎಲ್ಲರೂ ಹೇಳಿದ್ರು ಬಹಳ ಕೆಲಸ ಆಗಿದೆ ನಾನು ಮಾಡಿದ್ದೇನೆ ಎಂದು. ಆದರೆ ಇದೆಲ್ಲದರ ಹಿಂದೆ ಜಿಲ್ಲೆಯ 1682 ಪೊಲೀಸ್ ಸಿಬ್ಬಂದಿ ಸಹಕಾರವಿದೆ. ಜನಸಾಮಾನ್ಯರ ಮತ್ತು ಮಾಧ್ಯಮದವರ ಸಹಕಾರವಿತ್ತು ಎಂದು ಹೇಳುವಾಗ ಚನ್ನಬಸವಣ್ಣ ಎಸ್‌ಎಲ್ ಅವರ ಕಣ್ಣಂಚಿನಲ್ಲಿ ಒಂದು ಕ್ಷಣ ನೀರು ಚಿಮ್ಮಿ, ಗಂಟಲು ಕಟ್ಟಿ, ಭಾವುಕರಾಗಿ ಮಾತನಾಡಿದರು. ಸಭೆಯಲ್ಲಿ ಸೇರಿದ ಎಲ್ಲರೂ ಒಂದು ಕ್ಷಣ ಗದ್ಗದಿತರಾದರು.ಮುಂದುವರಿದು ಭಾವುಕರಾಗಿಯೇ ಮಾತನಾಡಿದ ಚನ್ನಬಸವಣ್ಣನವರು. ಈ ನನ್ನ 12 ತಿಂಗಳ ಅವಧಿಯಲ್ಲಿ ನನ್ನಿಂದ ತಿಳಿದೋ ತಿಳಿಯದೆಯೋ ಏನಾದರೂ ತಪ್ಪಾಗಿದ್ದರೆ ನಿಮ್ಮವನೆಂದು ಕ್ಷಮಿಸಿ ಎಂದು ಹೇಳುವಾಗ ಕಣ್ತುಂಬಾ ನೀರು ತಂದಿದ್ರು. ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯ ಎನ್ನುವ ಶರಣರ ವಾಣಿಯಂತೆ ಅತ್ತಿ ಹಣ್ಣು ಹೊರಗಡೆ ನೋಡಲು ಸುಂದರವಾಗಿಯೇ ಕಾಣುತ್ತೆ. ಆದರೆ ಒಳಗಡೆ ಒಂದಿಷ್ಟು ಏನಾದರೂ ಕೊರತೆ ಇದ್ದರೂ ಹೊಟ್ಟೆಗಾಕಿಕೊಳ್ಳಿ ಎಂದ್ರು.
ಮಳೆಗಾಲದ ಸಂದರ್ಭ. ಮೋಡಗಳು ಬರುತ್ತಿರುತ್ತವೆ. ಆದರೆ ಮೋಡಗಳು ಒಂದೇ ಕಡೆ ನಿಲ್ಲಲು ಆಗಲ್ಲ. ಎಲ್ಲಾ ಕಡೆ ನಮ್ಮ ಸೇವೆ ಬೇಕಾಗಿರುತ್ತದೆ. ಬೀದರ್ ಜಿಲ್ಲೆಗೆ ಅನಿರೀಕ್ಷಿತವಾಗಿ ಬಂದೆ. ಅನಿರೀಕ್ಷಿತವಾಗಿಯೇ ಹೋಗುತ್ತಿದ್ದೇನೆ. ಆದರೆ, ಇವುಗಳ ಮಧ್ಯ ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯನ್ನು ಶಾಶ್ವತವಾಗಿ ನನ್ನ ಮನದಲ್ಲಿ ಇಟ್ಟುಕೊಂಡು ಹೋಗುವೆ. ನೀವು ಕೂಡಾ ನಿಮ್ಮ ಹೃದಯದಲ್ಲಿ ನನಗೆ ಒಂದಿಷ್ಟು ಜಾಗ ಕೊಡಿ ಎಂದು ಮತ್ತಷ್ಟು ಭಾವುಕರಾಗಿ ನುಡಿದರು.ನೂತನವಾಗಿ ಅಧಿಕಾರ ಸ್ವೀಕರಿಸಿದ ಎಸ್‌ಪಿ ಪ್ರದೀಪ ಗುಂಟಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿದರು. ಇದೇ ವೇಳೆ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ, ಪೂರ್ಣಿಮಾ ಜಾರ್ಜ್, ಶಿವಕುಮಾರ ಕಟ್ಟೆ, ಶಾಹೀನ್ ಪಟೇಲ್ ಮಾತನಾಡಿದರು. ಇದೇ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣವರ್, ಚಂದ್ರಕಾಂತ ಪೂಜಾರಿ ಹಾಗೂ ಡಿವೈಎಸ್‌ಪಿ ಶಿವನಗೌಡ ಪಾಟೀಲ್ ಸೇರಿದಂತೆ ಅನೇಕರು ಇರಿದ್ದರು.ತೆರೆದ ಜೀಪಿನಲ್ಲಿ ಹೂಮಳೆಗೈದು ಬೀಳ್ಕೊಡುಗೆ: ಬೀದರ್ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಯಾದ ಚನ್ನಬಸವಣ್ಣ ಎಸ್‌ಎಲ್ ಅವರನ್ನು ತೆರೆದ ಜೀಪಿನಲ್ಲಿ ಹೂಮಳೆಗೆರೆಯುವ ಮೂಲಕ ಹಗ್ಗದಲ್ಲಿ ಜೀಪನ್ನು ಎಳೆಯುವ ಮೂಲಕ ಗೌರವಪೂರ್ವಕವಾಗಿ ಬೀಳ್ಕೊಟ್ಟರು.