ರಾಣಿ ಚೆನ್ನಮ್ಮ ಮೈದಾನ (ಈದ್ಗಾ ಮೈದಾನ)ದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನಿಗೆ ಬುಧವಾರ ಅದ್ಧೂರಿಯಾಗಿ ವಿದಾಯ ಹೇಳಲಾಯಿತು. ಗಣ್ಯಮಾನ್ಯರ ಕುಣಿತ, ವಿವಿಧ ಕಲಾಮೇಳಗಳ ಕಲಾ ಪ್ರದರ್ಶನ ವಿಸರ್ಜನಾ ಮೆರವಣಿಗೆಗೆ ಮೆರುಗು ತಂದವು.
ಹುಬ್ಬಳ್ಳಿ:
ಇಲ್ಲಿನ ರಾಣಿ ಚೆನ್ನಮ್ಮ ಮೈದಾನ (ಈದ್ಗಾ ಮೈದಾನ)ದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನಿಗೆ ಬುಧವಾರ ಅದ್ಧೂರಿಯಾಗಿ ವಿದಾಯ ಹೇಳಲಾಯಿತು. ಗಣ್ಯಮಾನ್ಯರ ಕುಣಿತ, ವಿವಿಧ ಕಲಾಮೇಳಗಳ ಕಲಾ ಪ್ರದರ್ಶನ ವಿಸರ್ಜನಾ ಮೆರವಣಿಗೆಗೆ ಮೆರುಗು ತಂದವು. ಈ ವರೆಗೆ 3 ದಿನಕ್ಕಷ್ಟೇ ಮಾತ್ರ ಪ್ರತಿಷ್ಠಾಪಿಸುತ್ತಿದ್ದು ಮುಂದಿನ ವರ್ಷದಿಂದ 21 ದಿನ ಪ್ರತಿಷ್ಠಾಪನೆ ಆಗಲಿ ಎಂದು ಗಣ್ಯರು ಆಶಿಸಿದರು.ಗಣೇಶ ಚತುರ್ಥಿ ದಿನದಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಗೆ ಬುಧವಾರ ಮಧ್ಯಾಹ್ನದ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮಧ್ಯಾಹ್ನ 12ಕ್ಕೆ ಮೈದಾನದಿಂದ ಗಣೇಶನ ಮೂರ್ತಿಯನ್ನು ಹೊರಗೆ ತರಲಾಯಿತು. ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭಾ ಕಾರ್ಯಕ್ರಮ ನಡೆಸಿ ಬಳಿಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಸಭಾ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ಮಾತನಾಡಿ, ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಸಾಕಷ್ಟು ಅಡ್ಡಿ ಎದುರಾಗಿತ್ತು. ಗಣೇಶನ ಪ್ರತಿಷ್ಠಾಪನೆ ಮಾಡಿದರೆ ಗಲಾಟೆಯಾಗುತ್ತದೆ ಎಂದು ಹಲವರು ಆತಂಕ ಪಟ್ಟಿದ್ದರು. ಆದರೆ, ಇಲ್ಲಿ ಗಣೇಶೋತ್ಸವವನ್ನು 5 ವರ್ಷದಿಂದ ಆಚರಿಸಲಾಗುತ್ತಿದೆ. ಒಂದೇ ಒಂದು ಸಣ್ಣ ಗಲಾಟೆಯೂ ಆಗಿಲ್ಲ ಎಂದರು.ಸದ್ಯ 3 ದಿನದ ವರೆಗೆ ಅಷ್ಟೇ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಅದು 21 ದಿನಕ್ಕೆ ವಿಸ್ತರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದ ಅವರು, ಹಿಂದೂಗಳು ಶಾಂತಿಪ್ರಿಯರು. ಆದರೆ, ನಮ್ಮ ತಂಟೆಗೆ ಬಂದರೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಇದೆ ಎಂದು ಸ್ಪಷ್ಟಪಡಿಸಿದರು.
ನಂತರ ನಡೆದ ವಿಸರ್ಜನಾ ಮೆರವಣಿಗೆ ಗೋಪಾಲಜಿ, ಮಾಜಿ ಸಚಿವ ಸಿ.ಸಿ. ಪಾಟೀಲ, ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಲಿಂಗರಾಜ ಪಾಟೀಲ ಚಾಲನೆ ನೀಡಿದರು.ಕುಣಿದು ಕುಪ್ಪಳಿಸಿದರು:
ಮೈದಾನದ ಬಳಿಯಷ್ಟೇ ಡಿಜಿ ಬಳಸಲಾಗಿತ್ತು. ಬಳಿಕ ಮೆರವಣಿಗೆಯುದ್ದಕ್ಕೂ ಜಾಂಜ್ ಮೇಳ, ಡೋಲು ಸೇರಿದಂತೆ ವಿವಿಧ ಕಲಾ ಮೇಳಗಳು ತಮ್ಮ ಕಲೆ ಪ್ರದರ್ಶಿಸಿದವು. ಡಿಜಿ ಇಲ್ಲದಿದ್ದರೂ ವಿವಿಧ ಕಲಾ ಮೇಳಗಳ ಸದ್ದಿಗೆ ಯುವ ಸಮೂಹ ಸೇರಿದಂತೆ ಎಲ್ಲರೂ ಹೆಜ್ಜೆ ಹಾಕಿದರು. ಜೈ ಶ್ರೀರಾಮ್, ಗಣೇಶ ಮಹಾರಾಜಕೀ ಜೈ, ಪವನಸುತ ಹನುಮಾನಕೀ ಜೈ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.ಮೆರವಣಿಗೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಮೇಯರ್ ದುರ್ಗಮ್ಮ ಬಿಜವಾಡ, ರಂಗಾಬದ್ಧಿ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್‌ನ ಮಾಲೀಕ ವಿಎಸ್‌ವಿ ಪ್ರಸಾದ, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಉಮಾ ಮುಕ್ಕುಂದ, ಮುಖಂಡರಾದ ಉಮೇಶ ದುಶಿ, ಸುಭಾಸಸಿಂಗ್ ಜಮಾದಾರ, ಮಹೇಂದ್ರ ಕೌತಾಳ, ಈಶ್ವರಗೌಡ ಪಾಟೀಲ ಸೇರಿದಂತೆ ಹಲವರಿದ್ದರು.