ಮಲೇಬೆನ್ನೂರಲ್ಲಿ ಅದ್ಧೂರಿ ಗಣೇಶ ಮೆರವಣಿಗೆ

| Published : Sep 20 2025, 01:00 AM IST

ಮಲೇಬೆನ್ನೂರಲ್ಲಿ ಅದ್ಧೂರಿ ಗಣೇಶ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಹಿಂದೂ ಮಹಾಗಣಪತಿ ಸಮಿತಿ ಆಶ್ರಯದಲ್ಲಿ ನಾಲ್ಕನೇ ವರ್ಷ ಪ್ರತಿಷ್ಟಾಪಿಸಿದ ಗಣೇಶ ಮೂರ್ತಿ ವಿಸರ್ಜನೆ ಮತ್ತು ಬೃಹತ್ ಶೋಭಾಯಾತ್ರೆ ಗುರುವಾರ ರಾತ್ರಿ ಸಂಪನ್ನಗೊಂಡಿತು.

- ಬೃಹತ್‌ ಶೋಭಾಯಾತ್ರೆಗೆ ಕಲಾ ತಂಡಗಳ ಮೆರುಗು । ಶಾಸಕ ಯತ್ನಾಳ್‌ ಭೇಟಿ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಹಿಂದೂ ಮಹಾಗಣಪತಿ ಸಮಿತಿ ಆಶ್ರಯದಲ್ಲಿ ನಾಲ್ಕನೇ ವರ್ಷ ಪ್ರತಿಷ್ಟಾಪಿಸಿದ ಗಣೇಶ ಮೂರ್ತಿ ವಿಸರ್ಜನೆ ಮತ್ತು ಬೃಹತ್ ಶೋಭಾಯಾತ್ರೆ ಗುರುವಾರ ರಾತ್ರಿ ಸಂಪನ್ನಗೊಂಡಿತು.

ಶೋಭಾಯಾತ್ರೆ ಸಾಗುವ ಎಲ್ಲ ಮಾರ್ಗಗಳೂ ಕೇಸರಿ ಬಂಟಿಂಗ್ಸ್‌, ಧ್ವಜಗಳಿಂದ ಶೃಂಗಾರಗೊಳಿಸಲಾಗಿದ್ದವು. ಯುವಜನರು, ಮಕ್ಕಳು, ಪುರುಷರು ಕಲಾ ತಂಡಗಳಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ವಿಘ್ನನಿವಾರಕನ ಹೊತ್ತ ವಾಹನವು ಹರಿಹರ-ಹೊನ್ನಾಳಿ ಮುಖ್ಯ ರಸ್ತೆ, ಸಂತೆ ರಸ್ತೆ, ಆಜಾದ್ ಸರ್ಕಲ್, ಮತ್ತೆ ಮುಖ್ಯ ರಸ್ತೆ, ಜಿಗಳಿ ವೃತ್ತ, ಪೇಟೆ ಬೀದಿ, ಕಾಲಭೈರವ ದೇವಾಲಯ, ಶಂಕರ ಮಠ, ಜಾಮಿಯಾ ಮಸೀದಿ, ಜ್ಯೋತಿ ಚಿತ್ರಮಂದಿರ ರಸ್ತೆಗೆ ಸಾಗಿತು. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಧಾರ್ಮಿಕ ವಿಧಿವಿಧಾನಗಳ ನೆರವೇರಿಸಿ, ಅಂತಿಮವಾಗಿ ಭದ್ರಾ ನಾಲೆಯಲ್ಲಿ ವಿಸರ್ಜಿಸಲಾಯಿತು.

ಭಟ್ಕಳದ ಚೆಂಡೆ ಮೇಳ, ಸಾಗರದ ಡೊಳ್ಳು, ಕೀಲು ಕುದುರೆ, ನಾಸಿಕ್‌ ಡೋಲು, ಹಲಗೆ, ತಮಟೆ ವಾದ್ಯ ಮುಂತಾದ ಜನಪದ ಕಲಾ ತಂಡಗಳು ಶೋಭಾಯಾತ್ರೆಗೆ ಮೆರಗು ನೀಡಿದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವೀರಗಾಸೆ, ಡೊಳ್ಳು ಕುಣಿತ ತಂಡಗಳ ನೃತ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯಪುರ ಕ್ಷೇತ್ರ ಶಾಸಕ, ಮಾಜಿ ಮಂತ್ರಿ ಬಸವನಗೌಡ ಯತ್ನಾಳ್ ರಾತ್ರಿ ಏಳೂವರೆಗೆ ಆಗಮಿಸಿದರು. ಯತ್ನಾಳರನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಮಧ್ಯಾಹ್ನದಿಂದಲೇ ಕಾದುಕುಳಿತಿದ್ದರು. ಪಟ್ಟಣಕ್ಕೆ ಆಗಮಿಸಿದ ಅವರು ಗಣಪತಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಸೂಕ್ಷ್ಮ ಪ್ರದೇಶ, ಭದ್ರತೆ ದೃಷ್ಠಿಯಿಂದ ಜಿಲ್ಲಾಡಳಿತ ಹಾಗೂ ಪೋಲಿಸರು ಯತ್ನಾಳ್‌ ಭಾಷಣಕ್ಕೆ ನಿರ್ಬಂಧ ಹೇರಿದ್ದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ್‌ ಸ್ವಾಮಿ ಮುಂತಾದ ಸಹಸ್ರಾರು ಅಭಿಮಾನಿಗಳು, ಮುಖಂಡರು ಗಣಪತಿ ದರ್ಶನ ಪಡೆದರು.

ಜಿಲ್ಲಾ ಎಸ್‌ಪಿ ವರಿಷ್ಠಾಧಿಕಾರಿ ಉಮಾ ಪ್ರಶಾಂತ್. ಡಿವೈಎಸ್ಪಿ ಬಸವರಾಜ್, ವೃತ್ತ ನಿರೀಕ್ಷಕ ಸುರೇಶ್ ಸಗರಿ ನೇತೃತ್ವದಲ್ಲಿ ನೂರಾರು ಪೋಲಿಸರು, ಗೃಹರಕ್ಷದಳ, ಜಿಲ್ಲಾ ಮೀಸಲು ಪೊಲೀಸ್ ತುಕಡಿ, ದುರ್ಗಾ ಪಡೆಯನ್ನು ಬಿಗಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

- - -

(ಬಾಕ್ಸ್‌) * ಮಜ್ಜಿಗೆ ವಿತರಿಸಿ ಸಾಮರಸ್ಯ ಮೆರೆದ ಮುಸ್ಲಿಮರು ಗಣೇಶ ಶೋಭಾಯಾತ್ರೆ ಕಾರಣ ವಾಹನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು. ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿ ಬೇರೆ ದಾರಿಯಿಲ್ಲದೇ ಖಾಸಗಿ ವಾಹನದಲ್ಲಿ ತೆರಳಿದರು. ಮಲೇಬೆನ್ನೂರಲ್ಲಿ ಗುರುವಾರ ಸಂತೆ ದಿನವಾದರೂ, ಸಂತೆ ನಡೆಯೋದಿಲ್ಲವೆಂಬ ಮಾಹಿತಿ ತಿಳಿದ ಗ್ರಾಮೀಣ ವ್ಯಾಪಾರಿಗಳು ಸಮೀಪದ ಹಳ್ಳಿಗಳಲ್ಲಿ ತರಕಾರಿ ಇತರೆ ವಸ್ತುಗಳನ್ನು ಮಾರಾಟ ಮಾಡಿ ತೆರಳಿದರು. ಬೆಳಗ್ಗೆ ಆರಂಭಗೊಂಡ ಅನ್ನದಾಸೋಹ ರಾತ್ರಿವರೆಗೂ ನಡೆದಿತ್ತು. ಹಳೇ ಪಂಚಾಯಿತಿ ಸರ್ಕಲ್, ಜಿಗಳಿ ವೃತ್ತ, ಆರಕ್ಷಕ ಠಾಣೆ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂತೆ ರಸ್ತೆಯ ಬೇಕರಿಯವರು ಉಚಿತ ಐಸ್‌ಕ್ರೀಮ್ ವಿತರಿಸಿದರು. ಧನಲಕ್ಷ್ಮೀ ಸಮೂಹ ಸಂಸ್ಥೆಯಿಂದ ೨೦೦೦೦ ಲಾಡು ವಿತರಿಸಿದರೆ, ಮುಸಲ್ಮಾನ ಬಾಂಧವರು ಗಣೇಶ ಚಿತ್ರಮಂದಿರದ ಬಳಿ ಭಕ್ತರಿಗೆ ೨೦೦೦ ಮಜ್ಜಿಗೆ ಪ್ಯಾಕೆಟ್‌ಗಳ್ನು ವಿತರಿಸಿ ಸಾಮರಸ್ಯ ಮೆರೆದರು.

- - -

-ಚಿತ್ರ-೧: ಗಣಪತಿ ವಿಸರ್ಜನೆಯಲ್ಲಿ ಭಾಗಿಯಾದ ಭಕ್ತಸಮೂಹ.

-ಚಿತ್ರ-೨: ಕಲಾತಂಡಗಳ ಪ್ರದರ್ಶನ.

-ಚಿತ್ರ-೩: ಬಸನಗೌಡ ಯತ್ನಾಳ್ ಭೇಟಿ.