ಸಾರಾಂಶ
ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬ ಕಳೆಗಟ್ಟಿದ್ದು, ಮನೆಮನೆಗಳು, ಬಡಾವಣೆಗಳ ಗಲ್ಲಿಗಲ್ಲಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜಿಸಲಾಗುತ್ತಿದೆ. ಇಲ್ಲಿನ ದೊಡ್ಡಗಣಪತಿ ದೇವಸ್ಥಾನ ಸೇರಿ ಪ್ರಮುಖ ಗಣೇಶ ದೇವಾಲಯಗಳಲ್ಲೂ ವಿಶೇಷ ಪೂಜೆ, ಹೋಮ ಹವನಾದಿಗಳು ನಡೆಯುತ್ತಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬ ಕಳೆಗಟ್ಟಿದ್ದು, ಮನೆಮನೆಗಳು, ಬಡಾವಣೆಗಳ ಗಲ್ಲಿಗಲ್ಲಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜಿಸಲಾಗುತ್ತಿದೆ. ಇಲ್ಲಿನ ದೊಡ್ಡಗಣಪತಿ ದೇವಸ್ಥಾನ ಸೇರಿ ಪ್ರಮುಖ ಗಣೇಶ ದೇವಾಲಯಗಳಲ್ಲೂ ವಿಶೇಷ ಪೂಜೆ, ಹೋಮ ಹವನಾದಿಗಳು ನಡೆಯುತ್ತಿವೆ.ಶನಿವಾರ ನಗರದೆಲ್ಲೆಡೆ ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಸಂಭ್ರಮವೂ ಅದ್ಧೂರಿಯಾಗಿ ನಡೆಯುತ್ತಿದೆ. ಅನ್ನಸಂತರ್ಪಣೆ, ಪ್ರಸಾದ ವಿತರಣೆ ಏರ್ಪಡಿಸಲಾಗಿದೆ.
ನಗರದ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದಲ್ಲಿ ಗಣಪತಿ ವಿಗ್ರಹಕ್ಕೆ ನಾಣ್ಯಗಳಿಂದ ಅಭಿಷೇಕ ಮಾಡಿ ಪೂಜಿಸಲಾಯಿತು. ಅದೇ ರೀತಿ ಕೆಂಗೇರಿ ಸಮೀಪದ ಪಂಚಮುಖಿ ಗಣೇಶ ದೇವಸ್ಥಾನ, ಕುಮಾರಸ್ವಾಮಿ ಲೇಔಟ್‌ನಲ್ಲಿರುವ 108 ಗಣೇಶನ ದೇವಾಲಯ, ಕಸ್ತೂರಬಾ ರಸ್ತೆಯಲ್ಲಿರುವ ಟ್ರಾಫಿಕ್ ಗಣೇಶ ದೇವಸ್ಥಾನ, ಬನಗಿರಿ ವರಸಿದ್ಧಿ ವಿನಾಯಕ ದೇವಾಲಯ, ಜಯನಗರ 4ನೇ ಬ್ಲಾಕ್‌ನಲ್ಲಿರುವ ಶಕ್ತಿ ಗಣಪತಿ ದೇವಸ್ಥಾನ, ಕೆ.ಆರ್.ಪುರ ಕಟ್ಟೆ ವಿನಾಯಕ ದೇವಾಲಯ, ಕೋರಮಂಗಲ ಟೆಕ್ಕಿ ಗಣೇಶ ದೇವಸ್ಥಾನ, ಗಿರಿನಗರದ ಗಣಪತಿ ದೇವಸ್ಥಾನ, ಲಿಂಗರಾಜಪುರಂನ ಕರಿಯಣ್ಣನ ಪಾಳ್ಯದ ಶಕ್ತಿ ಗಣಪತಿ ದೇವಸ್ಥಾನಗಳಲ್ಲಿ ಚತುರ್ಥಿ ಪೂಜೆಗಳು ನಡೆಯುತ್ತಿವೆ.ಕಬ್ಬನ್‌ಪೇಟೆಯ ಬಡಾವಣೆಗಳಲ್ಲಿ ವಿಶೇಷ ರೂಪದ ಗಣಪತಿಗಳನ್ನು ಯುವಕ ಮಂಡಳಿಗಳು ಪ್ರತಿಷ್ಠಾಪಿಸಿವೆ. ಚಿಕ್ಕಪೇಟೆ, ಬಳೆಪೇಟೆ, ಮಲ್ಲೇಶ್ವರ, ಶೇಷಾದ್ರಿಪುರ, ಜಯನಗರ ಸೇರಿ ನಗರದೆಲ್ಲೆಡೆ ಪೆಂಡಾಲ್‌ನಲ್ಲಿ ಹಲವು ಸ್ವರೂಪದ ಗಣಪತಿಗಳು ರಾರಾಜಿಸುತ್ತಿವೆ.
ಜೆಪಿ ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಗಣಪತಿಯನ್ನು ವಿಶೇಷವಾಗಿ ಕೃಷಿ ಉತ್ಪನ್ನಗಳಿಂದ ಅಲಂಕರಿಸಲಾಗಿತ್ತು. ಜೋಳ, ತೆಂಗಿನಕಾಯಿ, ಬೇಲದ ಕಾಯಿ ಸೇರಿ ಗಣಪತಿಗೆ ಪ್ರಿಯವಾದ ವಸ್ತುಗಳು, 36ಕ್ಕೂ ಹೆಚ್ಚಿನ ಹಣ್ಣು ಹೂವುಗಳಿಂದ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು. ವಿಶೇಷವಾಗಿ ಉತ್ತರಹಳ್ಳಿ ಮುಖ್ಯರಸ್ತೆಯ ಭಾರ್ಗವಿ ರಾಜೇಶ್ ಅವರ ಮನೆಯಲ್ಲಿ ಗಣಪತಿಯ ವಿವಿಧ ಸ್ವರೂಪದ 125ಕ್ಕೂ ಹೆಚ್ಚಿನ ಮೂರ್ತಿಗಳನ್ನು ಇಡಲಾಗಿದೆ.ಸಾರ್ವಜನಿಕರ ಗಣೇಶ ಮಂಟಪಗಳಲ್ಲಿ ಪ್ರತಿದಿನ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರಿಗಾಗಿ ಹಾಡು, ರಂಗೋಲಿ, ಆರತಿ ತಟ್ಟೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳಿಗೆ ಚಿತ್ರಕಲೆ ಸೇರಿ ಸ್ಪರ್ಧೆ, ನೃತ್ಯ ಕಾರ್ಯಕ್ರಮಗಳು ನಡೆಯುತ್ತಿವೆ.
ಸಂಜೆ ವೇಳೆ ಮೆರವಣಿಗೆ ಮೂಲಕ ಸ್ಯಾಂಕಿ ಟ್ಯಾಂಕ್, ಹಲಸೂರು ಕೆರೆ, ಯಡಿಯೂರು ಕೆರೆ ಸೇರಿ ಇತರೆಡೆ ಮೂರ್ತಿಗಳ ವಿಸರ್ಜನೆಯೂ ಸಂಭ್ರಮದಿಂದ ನಡೆಯುತ್ತಿದೆ. ವಿವಿಧೆಡೆ ಕೃತಕ ಕೆರೆ, ಸಂಚಾರಿ ಟ್ಯಾಂಕರ್‌ಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ.