ಹಾವೇರಿಯಲ್ಲಿ ಅದ್ಧೂರಿ ಹಿಂದು ಮಹಾಗಣಪತಿ ಶೋಭಾಯಾತ್ರೆ

| Published : Sep 30 2024, 01:19 AM IST

ಹಾವೇರಿಯಲ್ಲಿ ಅದ್ಧೂರಿ ಹಿಂದು ಮಹಾಗಣಪತಿ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕಾಗಿನೆಲೆ ಕ್ರಾಸ್ ಬಳಿ ವಿಶ್ವ ಹಿಂದು ಪರಿಷತ್ ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಕಿವಿಗಡಚಿಕ್ಕುವ ಡಿಜೆ ಅಬ್ಬರಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಾವಿರಾರು ಜನ ಗಣಪತಿ ವಿಸರ್ಜನಾ ಮೆರವಣಿಗೆ ಕಣ್ತುಂಬಿಕೊಂಡರು.

ಹಾವೇರಿ: ನಗರದ ಕಾಗಿನೆಲೆ ಕ್ರಾಸ್ ಬಳಿ ವಿಶ್ವ ಹಿಂದು ಪರಿಷತ್ ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಕಿವಿಗಡಚಿಕ್ಕುವ ಡಿಜೆ ಅಬ್ಬರಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಾವಿರಾರು ಜನ ಗಣಪತಿ ವಿಸರ್ಜನಾ ಮೆರವಣಿಗೆ ಕಣ್ತುಂಬಿಕೊಂಡರು. ಹಿಂದು ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆ ಗಣೇಶ ಮೂರ್ತಿಗಳಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಇದೇ ವೇಳೆ ಹಿಂದು ಪರಿಷತ್ ಪ್ರಮುಖ ಎಸ್.ಆರ್.ಹೆಗಡೆ, ಮಾಜಿ ಶಾಸಕ ಶಿವರಾಜ ಸಜ್ಜನರ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಬಿಜೆಪಿ ಮುಖಂಡ ಸಿದ್ದರಾಜ ಕಲಕೋಟಿ ಅವರನ್ನು ವಿಶ್ವ ಹಿಂದು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾಗಿನೆಲೆ ಕ್ರಾಸ್‌ನಿಂದ ಆರಂಭಗೊಂಡ ಅದ್ಧೂರಿ ಮೆರವಣಿಗೆ ಕಲ್ಲುಮಂಟಪ ರಸ್ತೆ, ಮೈಲಾರ ಮಹದೇವಪ್ಪ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ರಾಘವೇಂದ್ರಸ್ವಾಮಿ ಮಠ, ಸುಭಾಸ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ಪುರದ ಓಣಿ, ಎಂ.ಜಿ.ರೋಡ್, ಜೆ.ಪಿ.ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ವಾಲ್ಮೀಕಿ ಸರ್ಕಲ್ ಮೂಲಕ ಸಾಗಿತು. ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯುವಕರು, ಯುವತಿಯರು, ಮಕ್ಕಳು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಸಂಜೆ ಆಗುತ್ತಿದ್ದಂತೆ ಕಿಲೋ ಮೀಟರ್‌ವರೆಗೆ ಕತ್ತಲೆಯನ್ನು ಸೀಳಿಕೊಂಡು ಹೋಗುವ ಪ್ರಖರ ವಿದ್ಯುತ್ ಲೈಟಿಂಗ್, ಕಿವಿಗಡಚಿಕ್ಕುವ ಡಿಜೆ ಸೌಂಡ್‌ಗೆ ಸಾವಿರಾರು ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತ ಸಾಗಿದರು. ಕೇಸರಿ ಶಾಲು ತಿರುಗಿಸುತ್ತ, ಬಣ್ಣ ಎರಚುತ್ತ ಯುವಕರು ಹುಚ್ಚೆದ್ದು ಕುಣಿದರು. ಮಹಿಳೆಯರು, ಮಕ್ಕಳು, ಯುವಕರ ಸಂಭ್ರಮ ಮುಗಿಲು ಮುಟ್ಟಿತ್ತು. ಕೆಲವರಂತೂ ಸ್ನೇಹಿತರ ಹೆಗಲ ಮೇಲೇರಿಕೊಂಡು ಕುಣಿದರು. ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳ ಮನೆಗಳ ಎದುರು, ಮಾಳಿಗೆ ಮೇಲೆ ಜನರು ನಿಂತು ಗಣೇಶ ವಿಸರ್ಜನಾ ಮೆರವಣಿಗೆ ಕಣ್ತುಂಬಿಕೊಂಡರು. ನಗರದ ಜನತೆ ರಾತ್ರಿವರೆಗೂ ನಿಂತು ಮೆರವಣಿಗೆ ನೋಡಿದರು. ಶೋಭಾಯಾತ್ರೆಯಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಜನರು ಪಾಲ್ಗೊಂಡಿದ್ದರು. ತಡರಾತ್ರಿವರೆಗೂ ನಗರದಲ್ಲೇ ಸುತ್ತಾಡಿದ ಮೆರವಣಿಗೆ ಸೋಮವಾರ ಬೆಳಗಿನ ಜಾವದಲ್ಲಿ ವರದಾ ನದಿಯಲ್ಲಿ ಗಣೇಶ ವಿಸರ್ಜನೆ ಮೂಲಕ ಸಂಪನ್ನಗೊಂಡಿತು. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.