ಉದ್ಭವಮೂರ್ತಿ ಹೊನ್ನಾದೇವಿ ಅಮ್ಮನವರಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಅಭಿಷೇಕ, ಅಗ್ನಿಕೊಂಡ ಉತ್ಸವಗಳು ನಡೆದವು. ಮಂಗಳ ವಾದ್ಯದೊಂದಿಗೆ ಸಾವಿರಾರು ಭಕ್ತರು ಜಯಘೋಷ ಹಾಕುತ್ತಾ ಉತ್ಸವ ಮೂರ್ತಿಯನ್ನು ಸಿಂಗರಿಸಲಾಗಿದ್ದ ತೇರಿನಲ್ಲಿರಿಸಿದರು.

ದಾಬಸ್‍ಪೇಟೆ: ದಕ್ಷಿಣಕಾಶಿ ಎಂದೇ ಹೆಸರಾಗಿರುವ ಸೋಂಪುರ ಹೋಬಳಿಯ ಶಿವಗಂಗೆ ಗ್ರಾಮದ ಶ್ರೀ ಹೊನ್ನಾದೇವಿ (ಸ್ವರ್ಣಾಂಬದೇವಿ) ಅಮ್ಮನವರ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಉದ್ಭವಮೂರ್ತಿ ಹೊನ್ನಾದೇವಿ ಅಮ್ಮನವರಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಅಭಿಷೇಕ, ಅಗ್ನಿಕೊಂಡ ಉತ್ಸವಗಳು ನಡೆದವು. ಮಂಗಳ ವಾದ್ಯದೊಂದಿಗೆ ಸಾವಿರಾರು ಭಕ್ತರು ಜಯಘೋಷ ಹಾಕುತ್ತಾ ಉತ್ಸವ ಮೂರ್ತಿಯನ್ನು ಸಿಂಗರಿಸಲಾಗಿದ್ದ ತೇರಿನಲ್ಲಿರಿಸಿದರು.

ರಥೋತ್ಸವಕ್ಕೆ ಶ್ರದ್ಧಾಭಕ್ತಿಯಿಂದ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹಾಗೂ ಸ್ಥಳೀಯ ಮುಖಂಡರು ಚಾಲನೆ ನೀಡಿದರು. ಭಕ್ತರು ಜಯ ಘೋಷ ಹಾಕುವ ಮೂಲಕ ರಥವನ್ನು ಮುಂದೆ ಎಳೆದರು. ರಥ ಮುಂದೆ ಸಾಗುತ್ತಿದಂತೆ ಭಕ್ತರು ಹಣ್ಣು, ಧವನಗಳನ್ನು ರಥೋತ್ಸವದ ಮೇಲೆ ತೂರುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು.

ನಂತರ ಮಾತನಾಡಿದ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಶಿವಗಂಗೆಯು ಐತಿಹಾಸಿಕವಾಗಿ, ಧಾರ್ಮಿಕವಾಗಿ ಪ್ರವಾಸಿಗರ ನೆಚ್ಚಿನ ಕ್ಷೇತ್ರವಾಗಿದೆ. ನಾನು ಇದೇ ಮೊದಲ ಬಾರಿಗೆ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿದ್ದೇನೆ. ಮಕರ ಸಂಕ್ರಾಂತಿಯಂದು ನಡೆಯುವ ಗಿರಿಜಾ ಕಲ್ಯಾಣೋತ್ಸವ ಹಾಗೂ ಈ ರಥೋತ್ಸವವೂ ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆದಿವೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಜನತೆಗೆ ಕ್ಷೇತ್ರದ ಅಧಿದೇವರು ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಅರವಂಟಿಗೆ ಸೇವೆ: ಹರಕೆಹೊತ್ತ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಅನ್ನದಾಸೋಹ ನೀಡಿದರು. ಬಿಸಿಲಿನ ಬೇಗೆಯಲ್ಲಿದ್ದವರಿಗೆ ಅನ್ನ ಸಂತರ್ಪಣೆಯ ಜೊತೆಗೆ ಮಜ್ಜಿಗೆ, ಕೋಸಂಬರಿ, ಪಾನಕ, ನಿಂಬೆ ಜ್ಯೂಸ್, ಕಲ್ಲಂಗಡಿ, ಸೌತೆಕಾಯಿ ವಿತರಣೆ ದಾರಿಯುದ್ದಕ್ಕೂ ಕಂಡು ಬಂದಿತು.

ಗಣ್ಯರ ಭೇಟಿ:

ರಥೋತ್ಸವದಲ್ಲಿ ಧಾರ್ಮಿಕದತ್ತಿ ಇಲಾಖೆಯ ಇಒ ಬೃಂದ, ಪ್ರಧಾನ ಅರ್ಚಕರು, ಉಪ ತಹಸೀಲ್ದಾರ್ ಶಶಿಧರ್, ರಾಜಸ್ವ ನಿರೀಕ್ಷಕರಾದ ಸುಂದರರಾಜ್, ಮುನಿರಾಜು, ಗ್ರಾಮಲೆಕ್ಕಿಗ ಬಾಲಕೃಷ್ಣ, ದೇವಾಲಯ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ರೇಣುಕೇಶ್ವರ, ಗ್ರಾಪಂ ಮಾಜಿ ಸದಸ್ಯ ಮನುಪ್ರಸಾದ್, ಕರುನಾಡ ವಿಜಯಸೇನೆ ತಾಲೂಕು ಅಧ್ಯಕ್ಷ ವಸಂತಕುಮಾರ್, ಮುಖಂಡರಾದ ವಕೀಲ ಮಹೇಶ್, ಮನೋಹರ್, ಬಸವರಾಜು, ಗಣೇಶ್, ರೇಣುಕಪ್ಪ ಸೇರಿ ಹಲವರು ಇದ್ದರು.

------

ಪೋಟೋ 2 : ಸೋಂಪುರ ಹೋಬಳಿಯ ಶಿವಗಂಗೆ ಗ್ರಾಮದ ಶ್ರೀ ಹೊನ್ನಾದೇವಿ (ಸ್ವರ್ಣಾಂಬದೇವಿ) ಅಮ್ಮನವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.