ಹುಲಿವಾಹನದ ಎದುರು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಹರಕೆ ಹೊತ್ತ ಮಹಿಳೆಯರು ಬಾಯಿಬೀಗ ಹಾಕಿಕೊಂಡು ಹೂ- ಹಣ್ಣಿನ ಆರತಿಯೊಂದಿಗೆ ಸಾಗಿದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಆಂಜನೇಯ ಹಾಗೂ ಗೋರಿಲ್ಲ, ಕರಡಿ, ಶಿವ- ಪಾರ್ವತಿ, ಕೃಷ್ಣಗಾರುಡಿ, ಹುಲಿವೇಷ, ಮಹದೇಶ್ವರಸ್ವಾಮಿ ಪ್ರತಿರೂಪ, ಮಹಿಳೆಯರ ಓಂಶಕ್ತಿ ವೇಷಾಧಾರಿಗಳ ಕುಣಿತ ಹಾಗೂ ಹೆಣ್ಣುಮಕ್ಕಳು ಕುಣಿತ ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಮಹದೇಶ್ವರಪುರ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಲಕ್ಷ್ಮೀಸಾಗರ ಗ್ರಾಮಸ್ಥರು ಅದ್ಧೂರಿಯಾಗಿ ಹುಲಿವಾಹನೋತ್ಸವ ಮೆರವಣಿಗೆ ನಡೆಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಲಕ್ಷ್ಮೀಸಾಗರ ಗ್ರಾಮದ ಯಜಮಾನರಾದ ಕಿಟ್ಟೆಗೌಡ, ಎಲ್.ಡಿ.ಸಂಜಯ್, ಎಲ್.ಸಿ.ಶಶಿಕುಮಾರ್, ಎಲ್.ಕೆ.ರವಿ, ಎಲ್.ಸಿ.ಬೆಟ್ಟೇಗೌಡ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹುಲಿವಾಹನವನ್ನು ಬಣ್ಣಬಣ್ಣದ ಹೂ, ಹಣ್ಣುಗಳಿಂದ ಅಲಂಕರಿಸಿದರು.

ಈ ಬಾರಿ ದೇವರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ₹50 ನೋಟಿನಿಂದ ಮಾಡಿದ ಹಾರ ಹಾಕಿ ಅಲಂಕರಿಸಲಾಗಿತ್ತು. ಗ್ರಾಮದ ಯಜಮಾನರು ಹುಲಿವಾಹನಕ್ಕೆ ಮೊದಲ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರು, ಹೆಣ್ಣುಮಕ್ಕಳು, ಮಹಿಳೆಯರು ಸರತಿ ಸಾಲಿನಲ್ಲಿ ಆಗಮಿಸಿ ಹುಲಿವಾಹನಕ್ಕೆ ಪೂಜೆ ಸಲ್ಲಿಸಿದರು.

ಬಳಿಕ ಮಧ್ಯಾಹ್ನ ಹುಲಿವಾಹನೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹುಲಿವಾಹನೋತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹುಲಿವಾಹನವನ್ನು ಹೊತ್ತ ಮೆರವಣಿಗೆ ನಡೆಸಿದ ಯುವಕರು ಉಘೇ..ಉಘೇ ಮಾದಪ್ಪ, ಉಘೇ....ಉಘೇ ಮಾದಪ್ಪ ಎಂಬುದಾಗಿ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.

ಹುಲಿವಾಹನದ ಎದುರು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಹರಕೆ ಹೊತ್ತ ಮಹಿಳೆಯರು ಬಾಯಿಬೀಗ ಹಾಕಿಕೊಂಡು ಹೂ- ಹಣ್ಣಿನ ಆರತಿಯೊಂದಿಗೆ ಸಾಗಿದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಆಂಜನೇಯ ಹಾಗೂ ಗೋರಿಲ್ಲ, ಕರಡಿ, ಶಿವ- ಪಾರ್ವತಿ, ಕೃಷ್ಣಗಾರುಡಿ, ಹುಲಿವೇಷ, ಮಹದೇಶ್ವರಸ್ವಾಮಿ ಪ್ರತಿರೂಪ, ಮಹಿಳೆಯರ ಓಂಶಕ್ತಿ ವೇಷಾಧಾರಿಗಳ ಕುಣಿತ ಹಾಗೂ ಹೆಣ್ಣುಮಕ್ಕಳು ಕುಣಿತ ವಿಶೇಷವಾಗಿತ್ತು.

ಪೂಜಾಕುಣಿತ, ನಂದಿಕಂಬ, ಡೊಳ್ಳುಕುಣಿತ, ತಮಟೆ, ನಗಾರಿ, ವಾದ್ಯ ಸೇರಿ ಹಲವು ಕಲಾತಂಡಗಳು ಗಮನ ಸೆಳೆದವು. ಜತೆಗೆ ಮೆರವಣಿಗೆಯುದ್ದಕ್ಕೂ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ಯುವಕರು ಸಂಭ್ರಮಿಸಿದರು. ಮೆರವಣಿಗೆ ಸಾಗುವ ದಾರಿಯಲ್ಲೆಲ್ಲ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಣೆ ಮಾಡಿದರು.

ಹುಲಿವಾಹನೋತ್ಸವದ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗ್ರಾಮದ ಮುಖಂಡರು, ಓಂ ಶಕ್ತಿ, ಪದಾಧಿಕಾರಿಗಳು ಸಂಘ- ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಸಹಕಾರ ನೀಡಿದರು.

ನಂತರ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಹುಲಿವಾಹನೋತ್ಸವ ಮೆರವಣಿಗೆ ನಡೆಯಿತು. ದೇವಸ್ಥಾನದ ಸುತ್ತಲೂ ಮೂರು ಸುತ್ತು ಹುಲಿವಾಹನವನ್ನು ಮೆರವಣಿಗೆ ನಡೆಸಿ ಭಕ್ತಿಭಾವ ಪ್ರದರ್ಶಿಸಿದರು. ಹುಲಿವಾಹನೋತ್ಸವ ಮೆರವಣಿಗೆಗೆ ಮೇಲುಕೋಟೆಯ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿ ಜಾತ್ರೆಯನ್ನು ನಡೆಸಿಕೊಟ್ಟರು.