ಆಟೋ ಚಾಲಕರು, ಮಾಲೀಕರ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

| Published : Nov 06 2025, 03:00 AM IST

ಸಾರಾಂಶ

ಆಟೋ ಚಾಲಕರು ಮಾಲೀಕರು ಸಂಘದಿಂದ 18ನೇ ವರ್ಷದ ಕನ್ನಡ ರಾಜ್ಯೋತ್ಸವ ನಡೆಯಿತು.

‌ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ 18ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ 7.30ಕ್ಕೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಕಕ್ಕೆಹೊಳೆ ಬಳಿಯ ಬಸವೇಶ್ವರ ಪ್ರತಿಮೆ ಮುಂಭಾಗದಿಂದ ಆಟೋಗಳ ಮೆರವಣಿಗೆ ಅಂಬೇಡ್ಕರ್ ವೃತ್ತದವರೆಗೆ ನಡೆಯಿತು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸುವ ತಾತ್ಕಾಲಿಕ ವೇದಿಕೆಯಲ್ಲಿ ಬೆಳಗ್ಗೆ 10 ಗಂಟೆಗೆ ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ನಂತರ ಮಾತನಾಡಿ, ನಿರಂತರ ಜನರ ಸೇವೆಯೊಂದಿಗೆ ಜೀವನ ನಡೆಸುವ ಆಟೋ ಚಾಲಕರು ತಮ್ಮ ಆರೋಗ್ಯದತ್ತಲೂ ಗಮನ ಹರಿಸಬೇಕೆಂದರು. ವಾಹನದ ಎಲ್ಲ ದಾಖಲೆಯೊಂದಿಗೆ, ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ಕೆ.ಟಿ.ಡಿ.ಒ ತಾಲೂಕು ಘಟಕದ ಅಧ್ಯಕ್ಷ ವಸಂತ್, ಪ್ರಮುಖರಾದ ಸೋಮೇಶ್, ಶರತ್ ಇದ್ದರು.ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದಲ್ಲಿ ತಾಲೂಕು ಮಟ್ಟದ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.