ರಾಜಧಾನಿಯಲ್ಲಿ ರಾಜಾಜಿಸಿದ ರಾಜ್ಯೋತ್ಸವ ಬಾವುಟ

| N/A | Published : Nov 02 2025, 03:00 AM IST / Updated: Nov 02 2025, 08:03 AM IST

Karnataka Flag

ಸಾರಾಂಶ

ಎಲ್ಲೆಲ್ಲೂ ರಾರಾಜಿಸಿದ ಹಳದಿ-ಕೆಂಪು ಬಾವುಟ, ಕನ್ನಡ ಪರ ಘೋಷಣೆ, ಕನ್ನಡ ಪರ ಸಂಘಟನೆಗಳಿಂದ ವಿವಿಧ ಕಡೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ, ಸಂಘ-ಸಂಸ್ಥೆಗಳಿಂದ ಭುವನೇಶ್ವರಿ ದೇವಿಗೆ ನಮನ, ಆಟೋ ಸೇರಿದಂತೆ ವಿವಿಧ ವಾಹನಗಳಲ್ಲಿ ಹಾರಾಡಿದ ಕನ್ನಡ ಧ್ವಜ.  

 ಬೆಂಗಳೂರು : ಎಲ್ಲೆಲ್ಲೂ ರಾರಾಜಿಸಿದ ಹಳದಿ-ಕೆಂಪು ಬಾವುಟ, ಕನ್ನಡ ಪರ ಘೋಷಣೆ, ಕನ್ನಡ ಪರ ಸಂಘಟನೆಗಳಿಂದ ವಿವಿಧ ಕಡೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ, ಸಂಘ-ಸಂಸ್ಥೆಗಳಿಂದ ಭುವನೇಶ್ವರಿ ದೇವಿಗೆ ನಮನ, ಆಟೋ ಸೇರಿದಂತೆ ವಿವಿಧ ವಾಹನಗಳಲ್ಲಿ ಹಾರಾಡಿದ ಕನ್ನಡ ಧ್ವಜ. ಸರ್ಕಾರಿ ಹಾಗೂ ಖಾಸಗಿ ಕಚೇರಿ, ರಾಜಕೀಯ ಪಕ್ಷದ ಕಚೇರಿಯಲ್ಲಿ ಸಡಗರದಿಂದ ಆಚರಿಸಿದ ಕನ್ನಡ ಹಬ್ಬ.

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ವಿವಿಧ ರೀತಿಯಲ್ಲಿ ವೈವಿಧ್ಯಮವಾಗಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಯುವಕರು ದ್ವಿಚಕ್ರ ವಾಹನಗಳಿಗೆ ಕನ್ನಡ ಬಾವುಟ ಅಳವಡಿಸಿಕೊಂಡು ರ್‍ಯಾಲಿ ನಡೆಸಿದರು. ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡದ ಡಿಂಡಿಮ ಜೋರಾಗಿತ್ತು. ನಗರದಲ್ಲಿ ನಡೆದ ಮೆರವಣಿಗೆಗಳಲ್ಲಿ ಕನ್ನಡ ಸಂಸ್ಕೃತಿ, ಪರಂಪರೆ ಸಾರುವ ಜನಪದ, ಕನ್ನಡಕ್ಕಾಗಿ ದುಡಿದ ಮಹನೀಯರ ವೇಷಧಾರಿಗಳು ಗಮನ ಸೆಳೆದರು. ವಿಶೇಷವಾಗಿ ಸಾವಿರಾರು ಆಟೋರಿಕ್ಷಾಗಳಲ್ಲಿ ಚಾಲಕರು ಕನ್ನಡ ಹಾಡು, ಕನ್ನಡ ಬಾವುಟ ಇಟ್ಟುಕೊಂಡು ಸಂಚರಿಸಿದ್ದು ಆಕರ್ಷಕವಾಗಿತ್ತು.

ನಮ್ಮ ಮೆಟ್ರೋ, ಕೆಎಸ್‌ಆರ್‌ಟಿಸಿ ಸೇರಿ ಸಾರಿಗೆ ಸಂಸ್ಥೆಗಳಲ್ಲಿ ಕನ್ನಡಹಬ್ಬನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಿಬಿಎಯಲ್ಲಿ ರಾಜ್ಯೋತ್ಸವ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಬಳಿಕ ಮೊದಲ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ನಾಗರಿಕರಿಗೆ ಉತ್ತಮ ಸೇವೆ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ ಐದು ನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಜಿಬಿಎ ಆವರಣದಲ್ಲಿ ಧ್ವಜಾರೋಹಣ ಮಾಡಿ, ನಾಡದೇವಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ಜಿಬಿಎ ರಚನೆ ನಂತರ ಮೊದಲ‌ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಐದು ನಗರ ಪಾಲಿಕೆಗಳ ಜೊತೆ ಸಮನ್ವಯ ಮಾಡಿಕೊಂಡು ಜನರಿಗೆ ಉತ್ತಮ ಆಡಳಿತ ನೀಡಲಾಗುವುದು. ಅಧಿಕಾರಿ, ಸಿಬ್ಬಂದಿ ಚುರುಕಾಗಿ ಕೆಲಸ ಮಾಡಿ ಒಳ್ಳೆ ಸೇವೆ ನೀಡಬೇಕೆಂದು‌ ಹೇಳಿದರು.

ಮಾಜಿ ಮಹಾಪೌರರಾದ ಹುಚ್ಚಪ್ಪ, ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಉಪ ಆಯುಕ್ತ ರವೀಂದ್ರ, ಶರಣಪ್ಪ, ಜಂಟಿ ಆಯುಕ್ತ ಹೇಮಂತ್ ಇತರರಿದ್ದರು.

 ಬಿಡಿಎ ವತಿಯಿಂದ ರಾಜ್ಯೋತ್ಸವಬಿಡಿಎ ವತಿಯಿಂದ ಲೇಔಟ್‌ಗಳಲ್ಲಿ ಕನ್ನಡ ಭವನಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಬಿಡಿಎ ಅಧ್ಯಕ್ಷರಾದ ಎನ್‌. ಎ. ಹ್ಯಾರಿಸ್‌ ತಿಳಿಸಿದರು.ಎಂ.ಜಿ ರಸ್ತೆಯ ಬಾರ್ಟನ್‌ ಸೆಂಟರ್‌ನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ 5ನೇ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಗರವನ್ನು ಕನ್ನಡಮಯವನ್ನಾಗಿಸುವ ಜತೆಯಲ್ಲಿಯೇ, ಪರಭಾಷಿಗರು ಕನ್ನಡವನ್ನು ಓದುವಂತೆ ಉತ್ತಮ ಸೌಲಭ್ಯ ಒದಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರದಲ್ಲಿರುವ ಲೇಔಟ್‌ಗಳಲ್ಲಿ ಬಿಡಿಎ ವತಿಯಿಂದ ಕನ್ನಡ ಭವನ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಜಯ ಕರ್ನಾಟಕ ಜನಪರ ವೇದಿಕೆಯ ಗೌರವಾಧ್ಯಕ್ಷ ಗುಣರಂಜನ್‌ ಶೆಟ್ಟಿ ಮಾತನಾಡಿದರು. ಎಂ.ಜಿ. ರಸ್ತೆಯಿಂದ ಚರ್ಚ್‌ ಸ್ಟ್ರೀಟ್‌ ವರೆಗೆ ಕನ್ನಡದ ಮೆರವಣಿಗೆ ಮಾಡಲಾಯಿತು. ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್‌ ಇದ್ದರು. 

ಡಾ ರಾಜ್‌ಕುಮಾರ್‌ ಸಂಘದಿಂದ ಆಚರಣೆ

ಅಖಿಲ ಕರ್ನಾಟಕ ಕನ್ನಡ ಕಣ್ಮಣಿ ಡಾ. ರಾಜಕುಮಾರ್ ಸಾಂಸ್ಕೃತಿಕ ಸಂಸ್ಥೆ ನಗರದ ಮೈಸೂರು ಬ್ಯಾಂಕ್ ಚೌಕದ ಬಳಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣವನ್ನು ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ಎ. ಧರಣೇಶ್ ಗೌಡ. ಕನ್ನಡ ಚಳವಳಿ ಮುಖಂಡ ಪಾಲನೇತ್ರ. ಎಚ್. ವಿ. ಗಿರೀಶ್ ಗೌಡ, ಪ್ರಸನ್ ಕುಮಾರ್, ಯುವ ಮುಖಂಡ ಪ್ರಸನ್ನ ಕುಮಾರ್ ರೆಡ್ಡಿ ಇದ್ದರು.

 ಕಿದ್ವಾಯಿ ಆಸ್ಪತ್ರೆಯಲ್ಲಿ ಆಚರಣೆ

ವೈದ್ಯರು ಪ್ರತಿ ರೋಗಿಯೊಂದಿಗೆ ಕನ್ನಡದಲ್ಲಿ ಮಾತನಾಡಿ, ಆರೋಗ್ಯ ಸೇವೆಯ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ಹೇಳಿದರು.ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಶನಿವಾರ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸೇವೆಯ ಮೂಲಕ ನಾಡಿನ ಆರೋಗ್ಯವನ್ನು ಮತ್ತು ಜನರನ್ನು ಪ್ರೀತಿಸಬೇಕು ಎಂದರು. ಪ್ರತಿ ರೋಗಿಯೊಂದಿಗೆ ಕನ್ನಡದಲ್ಲಿ ಮಾತನಾಡಿ, ಪ್ರೀತಿಯಿಂದ ನಡೆದುಕೊಳ್ಳೋಣ. ನಮ್ಮ ಆರೋಗ್ಯ ಸೇವೆಯ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು ಎಂದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಬಿ.ಬಿ.ಸರೋಜಾ ಮಾತನಾಡಿದರು. ವೈದ್ಯಾಧಿಕಾರಿ ಡಾ.ಕೃಷ್ಣಪ್ಪ, ಎಂಜಿನಿಯರ್‌ ಮೋಹನ್‌ ಕುಮಾರ್‌, ಸಂಸ್ಥೆಯ ಸಿಬ್ಬಂದಿ ಇದ್ದರು. 

ಕೆಎಸ್‌ಆರ್‌ಟಿಸಿಯಲ್ಲಿ ಸಂಭ್ರಮದ ಆಚರಣೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ‌ ಪಾಷ‌ ಮಾತನಾಡಿ, ಆಲೂರು ವೆಂಕಟರಾಯರು, ಕುವೆಂಪು, ಅನಕೃ, ಇತರೆ ಮಹನೀಯರು ಕನ್ನಡ ನಾಡಿಗಾಗಿ ದುಡಿದಿದ್ದಾರೆ. ಕನ್ನಡ ನಾಡು ನುಡಿಯನ್ನು ಗೌರವಿಸಿ, ಉಳಿಸಿ, ಬೆಳೆಸುವ ಸಂಕಲ್ಪ ಪ್ರತಿಯೊಬ್ಬರಲ್ಲಿಯೂ ಮೂಡಬೇಕು. ಎಲ್ಲರನ್ನೂ ಪ್ರೋತ್ಸಾಹಿಸಿ ಭಾಷೆಯನ್ನು ಕಲಿಯುವಂತೆ ಮಾತನಾಡಬೇಕು. ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ನೆಲದ ಬಗ್ಗೆ ಹೆಮ್ಮೆ ಮತ್ತು ಗೌರವವಿರಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಕನ್ನಡ ಗೆಳೆಯರ ಬಳಗಕನ್ನಡದ ಸಮಸ್ಯೆ ಪರಿಹರಿಸಲು ರಾಜ್ಯೋತ್ಸವ ವೇದಿಕೆಯಾಗಲಿ ಎಂದು ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ ಹೇಳಿದರು.

ಅವರು ಕನ್ನಡ ಗೆಳೆಯರ ಬಳಗದಿಂದ ಕವಿ ಪ್ರತಿಮೆಗಳಿಗೆ ಮಾಲಾರ್ಪಣೆ ಮತ್ತು ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾ.ನಂ. ಚಂದ್ರಶೇಖರ ಮಾತನಾಡಿ, ಏಳು ದಶಕಗಳಲ್ಲಿ ಆಗಿರುವ ನಾಡು-ನುಡಿಯ ಕೆಲಸಗಳ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಲಿ. ಜತೆಗೆ ಕೇಂದ್ರ ಸರ್ಕಾರ ಭಾಷಾವಾರು ಪ್ರಾಂತಗಳ ಬಗ್ಗೆ ಮೌಲ್ಯಮಾಪನ ಮಾಡಲು ಇದು ಸಕಾಲ ಎಂದರು. ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ಕನ್ನಡ ಗೆಳೆಯರ ಬಳಗದ ಖಜಾಂಚಿ ಎಚ್.ಎನ್. ರಮೇಶ್ ಬಾಬು ಇತರರಿದ್ದರು.

ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ

ನಗರದ ಯಶವಂತಪುರ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭ ನಡೆಯಿತು.

ಸಾಹಿತಿ ಡಾ.ಎಸ್.ರಾಮಲಿಂಗೇಶ್ವರ, ಕನ್ನಡದ ಶ್ರೀಮಂತಿಕೆಯು ಇಂದು ಜಗದಗಲ ವಿಸ್ತಾರಗೊಂಡಿದೆ.‌ ಕನ್ನಡದ ಹಿರಿಯರು ಕೆಲಸಕಾರ್ಯಗಳ‌ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದು, ಅವರ ಮಾರ್ಗದರ್ಶನದಲ್ಲಿ ಮುಂದುವರಿಯೋಣ ಎಂದರು. ಮುಖ್ಯೋಪಾಧ್ಯಾಯ ಡಾ.ವಿನೀತ ರಾಜೇಶ್, ಕನ್ನಡ ವಿಭಾಗದ ಹಿರಿಯ ಅಧ್ಯಾಪಕ ವಿಜಯ್ ಕುಮಾರ್, ಮಹದೇವಸ್ವಾಮಿ, ಸಿದ್ಧಗಂಗಮ್ಮನಾಗರಾಜ್ ‌ಸೇರಿ ಇತರರಿದ್ದರು. 

Read more Articles on