ಹರಪನಹಳ್ಳಿ: ಜೂ.1ರಂದು ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಅದ್ಧೂರಿಯಾಗಿ ಶಾಲಾ ಪ್ರಾರಂಭೋತ್ಸವ ಜರುಗಲಿದೆ.ಈ ಕುರಿತು ಮಾಹಿತಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಮಕ್ಕಳನ್ನು ವಿಶಿಷ್ಟವಾಗಿ ಸ್ವಾಗತ ಮಾಡಿಕೊಳ್ಳಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಾಲೂಕಿನ ಎಲ್ಲ ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದೆ.
ತಾಲೂಕಿಗೆ ಈಗಾಗಲೇ ಪಠ್ಯಪುಸ್ತಕಗಳು, ಸಮವಸ್ತ್ರ ಸರಬರಾಜಾಗಿದೆ. ಪ್ರಾರಂಭದ ದಿನದಂದೇ ಎಲ್ಲ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವುದರ ಮೂಲಕ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಮಕ್ಕಳನ್ನು ಸ್ವಾಗತಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಿದ್ದಾರೆ.ಎಲ್ಲ ತರಗತಿ ಕೊಠಡಿಗಳು, ಅಡುಗೆ ಕೋಣೆ, ಮುಖ್ಯಗುರುಗಳ ಕೊಠಡಿ, ಶಾಲಾ ಮೈದಾನ, ಶೌಚಾಲಯಗಳು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಶಾಲೆಯನ್ನು ಸುಂದರಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರಾರಂಭೋತ್ಸವ ದಿನದಂದು ಪೋಷಕ, ಶಿಕ್ಷಕರ ಸಭೆ, ಎಸ್ ಡಿಎಂಸಿ ಸಭೆಯನ್ನು ಆಯೋಜನೆ ಮಾಡಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಎಲ್ಲ ರೀತಿಯ ಉಪಕ್ರಮಗಳನ್ನು ಅನುಷ್ಠಾನ ಮಾಡಲು ನಡಾವಳಿ ಮಾಡಲು ಎಲ್ಲ ಮುಖ್ಯ ಗುರುಗಳಿಗೆ ಸೂಚಿಸಿದೆ. ಪ್ರಾರಂಭದ ಎರಡು ಅವಧಿಗಳಲ್ಲಿ ಮಕ್ಕಳಿಗೆ ಸ್ವಾಗತ ಕೋರಿ ಮೂರನೇ ಅವಧಿಯಿಂದಲೇ ಪಾಠ ಬೋಧನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.ದಾಖಲಾತಿ ಆಂದೋಲನ ಕೈಗೊಂಡು 6 ರಿಂದ 14 ವರ್ಷ ಒಳಗಿನ ಎಲ್ಲಾ ಮಕ್ಕಳು ಕೂಡ ಶಾಲೆಗೆ ದಾಖಲಾಗುವಂತೆ ಕ್ರಮವಹಿಸಲು ಮನೆಮನೆ ಭೇಟಿ ಮಾಡಲು ಕ್ರಮ ವಹಿಸಲಾಗಿದೆ.
ಮಕ್ಕಳಿಗೆ ಓದು ಬರಹ ಬುನಾದಿ ಲೆಕ್ಕಗಳನ್ನು ಕಲಿಸಲು, ಮಕ್ಕಳ ಕಲಿಕಾ ಮಟ್ಟ ತಿಳಿಯಲು, ಮಕ್ಕಳು ಸಂತೋಷದಾಯಕವಾಗಿ ಕಲಿಯಲು ಸೇತುಬಂಧದ ಮೂಲಕ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶಾಲೆ ಪ್ರಾರಂಭವಾಗಿ ಎಲ್ಲ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಲು ಮಿಂಚಿನ ಸಂಚಾರ ಹಮ್ಮಿಕೊಂಡಿದೆ ಎಂದು ಹೇಳಿದ್ದಾರೆ.
ತಾಲೂಕಿನಲ್ಲಿ ಒಟ್ಟು 264 ಸರ್ಕಾರಿ ಪ್ರಾಥಮಿಕ ಶಾಲೆಗಳು ಇದ್ದು, 25 ಸರ್ಕಾರಿ ಪ್ರೌಢಶಾಲೆಗಳಿದ್ದು, ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕ &ಸಮವಸ್ತ್ರ ವಿತರಣೆ ಮಾಡಿದ್ದು, ವಿತರಣೆಗೆ ಕ್ರಮವಹಿಸಿದೆ. ಒಂದು ತಿಂಗಳಲ್ಲಿ 20ರವರೆಗೆ ಮಗ್ಗಿ ಕಲಿಯಲು ಮಗ್ಗಿ ಸುಗ್ಗಿ ಕಾಕಾರ್ಯಕ್ರಮ ಅನುಸ್ಥಾನ ಮಾಡಲು ಕ್ರಮವಹಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.