ಸಾರಾಂಶ
- ಸರ್ಕಾರ ಅಲ್ಪ ಹಣ ನೀಡಿದರೂ ಗ್ರಾಮೀಣರ ನೆರವಿನಿಂದ ಉತ್ತಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿಭಾ ಕಾರಂಜಿ ನಡೆಸಲು ಸರ್ಕಾರ ಅಲ್ಪಹಣ ಮಾತ್ರ ನೀಡುತ್ತದೆ. ಆದರೆ, ಗ್ರಾಮಸ್ಥರು ದಾನಿಗಳ ಸಹಕಾರದಿಂದ ಅದ್ಧೂರಿಯಾಗಿ ಸಂಭ್ರಮದಿಂದ ಪ್ರತಿಭಾ ಕಾರಂಜಿ ನಡೆಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುವಾರ ಈಚಿಕೆರೆ ( ಬಿ.ಎಚ್. ಕೈಮರ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರಸಿಂಹರಾಜಪುರ ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ತಾಲೂಕಿನ 9 ಕ್ಲಸ್ಟರ್ ಮಟ್ಟದಲ್ಲಿ 6 ಕ್ಲಸ್ಟರ್‌ಗಳ ಪ್ರತಿಭಾ ಕಾರಂಜಿ ಮುಕ್ತಾಯವಾಗಿದೆ. ಬಾಳೆಹೊನ್ನೂರಿನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಯಲಿದೆ. ಗುಬ್ಬಿಗಾ ಗ್ರಾಪಂನಲ್ಲಿ 2 ವಲಯ ಮಟ್ಟದ ಪ್ರತಿಭಾ ಕಾರಂಜಿ ನಡೆದಿದೆ. ನರಸಿಂಹರಾಜಪುರ ಜನರು ಹೆಚ್ಚು ಶಿಕ್ಷಣ ಪ್ರೇಮಿಗಳಾಗಿದ್ದು ಪ್ರತಿ ಗ್ರಾಮದಲ್ಲೂ ಸರ್ಕಾರಿ ಶಾಲೆಗಳ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದರು.ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭಾ ಅನಾವರಣಗೊಳ್ಳಲು ಇದೊಂದು ಉತ್ತಮ ಅವಕಾಶ. ಮಕ್ಕಳು ಈ ವೇದಿಕೆ ಉಪಯೋಗಿಸಿಕೊಂಡು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ಹಾಕಬೇಕಾಗಿದೆ. ಈ ಪ್ರತಿಭಾ ಕಾರಂಜಿಗೆ ಅನೇಕ ದಾನಿಗಳು ಕೈ ಜೋಡಿಸಿದ್ದಾರೆ ಎಂದರು.
ಗುಬ್ಬಿಗಾ ಗ್ರಾಪಂ ಸದಸ್ಯ ಹಾಗೂ ಕೆಡಿಪಿ ಸದಸ್ಯ ಸಾಜು ಮಾತನಾಡಿ, ದೈಹಿಕ ಹಾಗೂ ಮಾನಸಿಕ ಸಾಮಾರ್ಥ್ಯ ಇದ್ದವರು ಹೆಚ್ಚು ಸಾಧನೆ ಮಾಡುತ್ತಾರೆ. ಆದ್ದರಿಂದ ಸರ್ಕಾರ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ನಡೆಸುತ್ತಿದೆ. ಇಂತಹ ಅವಕಾಶ ಉಪಯೋಗಿಸಿಕೊಂಡು ಮಕ್ಕಳು ಗೆದ್ದು ತಾಲೂಕು , ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲೂ ತಮ್ಮ ಸಾಮಾರ್ಥ್ಯ ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್ ಮಾತನಾಡಿ, ಮಕ್ಕಳು ಪಠ್ಯಕ್ಕೆ ಮಾತ್ರ ಸೀಮಿತವಾಗಿರದೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಹೊಂದಬೇಕು ಎಂಬ ದೃಷ್ಠಿಯಿಂದ ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಏರ್ಪಡಿಸುತ್ತಿದೆ. ಪ್ರತಿಯೊಬ್ಬರು ನಾನು ಎನ್ನದೆ ನಾವು ಎಂದು ಸಹಕಾರ ಮನೋಭಾವದಿಂದ ಕೆಲಸ ಮಾಡಿದಾಗ ಇಂತಹ ಸಮಾರಂಭವನ್ನು ಸುಲಭವಾಗಿ ನಡೆಸಬಹುದು ಎಂದರು.
ಸಭೆ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ರಮಾಕಾಂತ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಸದಸ್ಯರಾದ ಉಮಾದೇವಿ, ವಸಂತ ಕೋಟ್ಯಾನ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಪ್ರಶೀಲ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ , ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ನಂಜುಂಡಪ್ಪ,ಶಿಕ್ಷಣ ಸಂಯೋಜಕರಾದ ರಂಗಪ್ಪ, ಸಂಗೀತ,ಸಿ.ಆರ್.ಪಿ. ಅನಂತಪ್ಪ, ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಬಿ.ಟಿ.ಪ್ರಕಾಶ,ಬೋಗೇಶಪ್ಪ, ರಾಜಾನಾಯ್ಕ ಇದ್ದರು.ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ ಅವರನ್ನು ಸನ್ಮಾನಿಸಲಾಯಿತು. ವೀಣಾ ಸ್ವಾಗತಿಸಿದರು. ಪುಷ್ಪ ಕಾರ್ಯಕ್ರಮ ನಿರೂಪಿಸಿದರು. ಅಮಿತ ವಂದಿಸಿದರು.11 ಶಾಲೆಗಳ ಮಕ್ಕಳು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.