ಚನ್ನಗಿರಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಿಂದೂ ಏಕತಾ ಗಣೇಶೋತ್ಸವ ಸೇವಾ ಸಮಿತಿಯವರು ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯ ವಿಸರ್ಜನೆಯನ್ನು ಗುರುವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಬಳಿಯ ಗಣಪತಿ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಿಂದೂ ಏಕತಾ ಗಣೇಶೋತ್ಸವ ಸೇವಾ ಸಮಿತಿಯವರು ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯ ವಿಸರ್ಜನೆಯನ್ನು ಗುರುವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಬಳಿಯ ಗಣಪತಿ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.

ಗುರುವಾರ ಮಧ್ಯಾಹ್ನ 12.30ರ ಸಮಯಕ್ಕೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಗಣಪತಿ ಮೂರ್ತಿಗೆ ತಹಸೀಲ್ದಾರ್ ಎನ್.ಜೆ.ನಾಗರಾಜ್, ಡಿ.ವೈ.ಎಸ್.ಪಿ. ರುದ್ರಪ್ಪ ಎಸ್.ಉಜ್ಜನಕೊಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ರವೀಶ್ ಮತ್ತು ಸಿಬ್ಬಂದಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ರಾಜಬೀದಿಯ ಮೆರವಣಿಗೆಗೆ ಚಾಲನೆ ನೀಡಿದರು.

ಗಣಪತಿ ರಾಜಬೀದಿ ಉತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳಾದ ಹುಲಿ ಕುಣಿತ, ಗೊಂಬೆ ಕುಣಿತ, ಚಂಡೆ, ಕೀಲು ಕುದುರೆ, ಡೊಳ್ಳು ಕುಣಿತ, ವೀರಗಾಸೆ, ನಾಸಿಕ್ ಡೋಲ್, ತಮಟೆ ಸೇರಿದಂತೆ ಇನ್ನು ಹಲವು ಪ್ರಕಾರಗಳ ಕಲಾ ತಂಡಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆದವು.

ಅಧಿಕವಾಗಿ ಶಬ್ದ ಹೊರ ಸೂಸುತ್ತಿದ್ದ ಎರಡು ಡಿ.ಜೆ. ಮ್ಯೂಸಿಕ್‌ಗಳಿಂದ ಬರುತ್ತಿದ್ದ ಹಾಡುಗಳ ಸದ್ದಿಗೆ ಯುವಜನರು ಕುಣಿದು ಕುಪ್ಪಳಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಡಿವೈಎಸ್‌ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಈ ಸಂದರ್ಭ ಸಮಿತಿಯ ಪ್ರಮುಖರಾದ ಸಿ.ಎಚ್.ಶ್ರೀನಿವಾಸ್, ಕಾಫಿಪುಡಿ ಶಿವಾಜಿ ರಾವ್, ದೀಪು ಗಾರ್ಘೆ, ಜಿತೇಂದ್ರರಾಜ್, ಧರಣೇಂದ್ರ, ಶಶಿಕುಮಾರ್, ಪೆಟ್ರೋಲ್ ಬಂಕ್ ಆನಂದ್, ಗಿರೀಶ್, ಸಿ.ವೈ. ರವಿಕುಮಾರ್, ಕೆ.ಆರ್.ಮಂಜುನಾಥ್, ಜಿ.ಎ.ನಟರಾಜ್, ಜಯದೇವ್, ಮೆಣಸಿನಕಾಯಿ ಮೂರ್ತಿ, ರಾಕೇಶ್ ಪಾಂಡೆ, ಮೊಟ್ಟೆ ತಿಮ್ಮಣ್ಣ, ಮಂಜುನಾಥ್ ಮೊದಲಾದವರು ಹಾಜರಿದ್ದರು.

- - -

(ಬಾಕ್ಸ್‌)

* ಮುಸ್ಲಿಮರಿಂದ ಪುಷ್ಪನಮನ, ತಂಪು ಪಾನೀಯ ವಿತರಣೆ ಗಣೇಶ ವಿಸರ್ಜನಾ ಪೂರ್ವ ಮೆರವಣಿಗೆಯು ಪೇಟೆ ಬೀದಿಯ ದರ್ಗಾದ ಬಳಿ ಬರುತ್ತಿದ್ದಂತೆಯೇ ಮುಸ್ಲಿಂ ಸಮಾಜದ ಮುಖಂಡರಾದ ಸರ್ದಾರ್, ರಹಮತ್ ಉಲ್ಲಾ, ಗೌಸ್ ಪೀರ್, ಖದೀರ್, ತನ್ವಿರ್, ಅತಾವುಲ್ಲಾ, ಅಬಿದ್ ಉಲ್ಲಾ ಅವರು ಗಣಪತಿ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ ಭಕ್ತರಿಗೆ ತಂಪು ಪಾನೀಯ, ಹಣ್ಣುಗಳನ್ನು ವಿತರಿಸಿ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದರು.

- - -

-24ಕೆಸಿಎನ್ಜಿ2: ಗಣಪತಿ ಮೂರ್ತಿ ಹೊತ್ತ ಅಲಂಕೃತ ವಾಹನವನ್ನು ತಹಶೀಲ್ದಾರ್ ಎನ್.ಜೆ.ನಾಗರಾಜ್ ಚಾಲನೆ ಮಾಡುವ ಮೂಲಕ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿದರು.