ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯ್ಕ ಅವರನ್ನು ನಗರದ ಕೆಸಿ ವೃತ್ತದಿಂದ ಸಮ್ಮೇಳನ ನಡೆಯುವ ಹಳೆ ನಗರಸಭೆಯ ಮೈದಾನದವರೆಗೆ ಭವ್ಯ ಮೆರವಣಿಗೆಯ ಮೂಲಕ ಶನಿವಾರ ಬರಮಾಡಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ದಾಂಡೇಲಿ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯ್ಕ ಅವರನ್ನು ನಗರದ ಕೆಸಿ ವೃತ್ತದಿಂದ ಸಮ್ಮೇಳನ ನಡೆಯುವ ಹಳೆ ನಗರಸಭೆಯ ಮೈದಾನದವರೆಗೆ ಭವ್ಯ ಮೆರವಣಿಗೆಯ ಮೂಲಕ ಶನಿವಾರ ಬರಮಾಡಿಕೊಳ್ಳಲಾಯಿತು.ಮೆರವಣಿಗೆಗೂ ಮುನ್ನ ರೋಹಿದಾಸ್ ನಾಯ್ಕ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಿದರು. ನಂತರ ಕನ್ನಡಾಂಬೆಯ ಭಾವಚಿತ್ರಕ್ಕೆ ಸತ್ಪುರುಷ ದಾಂಡೇಲಪ್ಪ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುದತ್ತ ಮಿರಾಶಿ ಅವರು ಮಾಲಾರ್ಪಣೆ ಮಾಡಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭ ಹಾರೈಸಿದರು.
ಮೆರವಣಿಗೆಗೆ ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಚಾಲನೆ ನೀಡಿ, ಇದು ಸಮ್ಮೇಳನದಾಧ್ಯಕ್ಷರ ಮೆರವಣಿಗೆ ಎನ್ನುವುದಕ್ಕಿಂತಲೂ ಜಗತ್ತಿನ ಶ್ರೀಮಂತ ಹಾಗೂ ಸುಂದರ ಭಾಷೆಯಾದ ಕನ್ನಡ ಭಾಷೆಯ ವಿಜಯೋತ್ಸವದ ಮೆರವಣಿಗೆ ಎಂದರು.ಕನ್ನಡದ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯಶಾಲಿಗಳು. ಕನ್ನಡವನ್ನು ಉಳಿಸಿ ಬೆಳೆಸುವ ಮಹೋನ್ನತ ಕಾರ್ಯದಲ್ಲಿ ನಾವೆಲ್ಲ ಸಕ್ರಿಯರಾದಾಗ ಮಾತ್ರ ಕನ್ನಡ ಮತ್ತಷ್ಟು ವಿಜೃಂಭಿಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಸ್ಪೂರ್ತಿಯಾಗಲಿ ಎಂದು ಸಮ್ಮೇಳನಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ತಹಶೀಲ್ದಾರ್ ಶೈಲೇಶ ಪರಮಾನಂದ, ತಾಪಂ ಇಒ ಟಿ.ಸಿ. ಹಾದಿಮನಿ, ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ಸಿಪಿಐ ಜೈಪಾಲ್ ಪಾಟೀಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್ ಚೌಹ್ವಾಣ್, ಇನ್ನರ್ ವಿಲ್ ಕ್ಲಬ್ ಅಧ್ಯಕ್ಷ ಶ್ವೇತಾ ಜಾಧವ, ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಎಸ್.ಜೈನ್, ಪಿಡಿಒ ಸಂಘದ ಕಾರ್ಯದರ್ಶಿ ಸಂತೋಷ ರಾಥೋಡ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿ ಸಂಸ್ಥೆಯ ಯೋಜನಾಧಿಕಾರಿ ಸಂಜೀವ್ ಜೋಶಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೋಜ, ಆಟೋ ಚಾಲಕರ -ಮಾಲೀಕರ ಸಂಘದ ಅಧ್ಯಕ್ಷ ಬಾಬಾಸಾಬ ಜಮಾದಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಸಿ. ನಾಯ್ಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸೇರಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕನ್ನಡಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.10 ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ವಿಶೇಷವಾದ ಮೆರುಗನ್ನು ತಂದುಕೊಟ್ಟವು. ಸಿಆರ್‌ಪಿ ಲಲಿತಾ ಗೌಡ ನಿರೂಪಿಸಿದರು. ಶಿಕ್ಷಕ ರವಿ ಶಾನಭಾಗ ಸ್ವಾಗತಿಸಿ, ಸಿಆರ್‌ಪಿ ಶ್ರೀದೇವಿ ವಂದಿಸಿದರು.
ಇದಕ್ಕೂ ಮುನ್ನ ಸಮ್ಮೇಳನ ನಡೆಯುವ ಹಳೆ ನಗರಸಭೆ ಮೈದಾನದಲ್ಲಿ ತಹಶೀಲ್ದಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕಸಪಾ ಜಿಲ್ಲಾಧ್ಯಕ್ಷರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ತಾಪಂ ಇಒ ಕನ್ನಡ ಧ್ವಜಾರೋಹಣ ನೆರವೇರಿಸಿದರು.ಶಿಕ್ಷಕ ಜಯದೇವ ಸಿರಿಗೆರೆ ನಿರೂಪಿಸಿ, ಸುರೇಶ್ ಪಾಲಂಕರ್ ಸ್ವಾಗತಿಸಿದರು. ಸುಧಾಕರ್ ಶೆಟ್ಟಿ ವಂದಿಸಿದರು.