ಇಲ್ಲಿನ ಕನ್ನರ್ಪಾಡಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ 21ನೇ ವರ್ಷದ ಗಣೇಶೋತ್ಸವವು ರಾಹೆ 66ರ ಕಿನ್ನಿಮುಲ್ಕಿ ಸ್ವಾಗತಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ. 14ರಿಂದ 23ರವರೆಗೆ 10 ದಿನಗಳ ವೈಭವದಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ ಅವರು ತಿಳಿಸಿದ್ದಾರೆ.
ಉಡುಪಿ : ಇಲ್ಲಿನ ಕನ್ನರ್ಪಾಡಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ 21ನೇ ವರ್ಷದ ಗಣೇಶೋತ್ಸವವು ರಾಹೆ 66ರ ಕಿನ್ನಿಮುಲ್ಕಿ ಸ್ವಾಗತಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ. 14ರಿಂದ 23ರವರೆಗೆ 10 ದಿನಗಳ ವೈಭವದಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ ಅವರು ತಿಳಿಸಿದ್ದಾರೆ.ಸೋಮವಾರ ಬೆಳಿಗ್ಗೆ 8.30ಕ್ಕೆ ಭವ್ಯ ಮೆರವಣಿಗೆಯಲ್ಲಿ ವಿಗ್ರಹವನ್ನು ತಂದು ಪ್ರತಿಷ್ಠಾಪನೆ ನಡೆಸಲಾಗುವುದು, ನಂತರ 6 ಕಾಯಿ ಗಣಹೋಮ, ಮಹಾಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಸೆ. 15 ಬಾಲಗಣಪತಿ ಹೋಮ, ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮವನ್ನು ಖ್ಯಾತ ಸಿವಿಲ್ ಇಂಜಿನಿಯರ್ ಎಂ. ಗಂಗಾಧರ ರಾವ್ ಕನ್ನರ್ಪಾಡಿ ಉದ್ಘಾಟಿಸಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷ, ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ನಾಡೋಜ ಡಾ. ಕೃಷ್ಣಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
16ರಂದು ಲಕ್ಷ್ಮೀ ಗಣಪತಿ ಹೋಮ, 17 ರಂದು ಪ್ರಸನ್ನ ಗಣಪತಿ ಹೋಮ, 18 ರಂದು 108 ಕಾಯಿ ಗಣಯಾಗ, 19 ರಂದು ಹರಿದ್ರಾ ಗಣಪತಿ ಹೋಮ, 20 ರಂದು ಸಹಸ್ರ ಮೋದಕ ಹೋಮ, 21ರಂದು ಹೇರಂಬ ಗಣಪತಿ ಹೋಮ, 22 ರಂದು ಏಕಾದಶಿ ನಡೆಯಲಿದೆ. 22ರಂದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ವಹಿಸಲಿದ್ದು, ಅತಿಥಿಗಳಾಗಿ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ಮತ್ತು ಯು.ಟಿ.ಖಾದರ್ ಅಭಿಮಾನಿ ಬಳಗದ ಅಧ್ಯಕ್ಷ ರಾಮಪ್ರಸಾದ್ ಭಾಗವಹಿಸಲಿದ್ದಾರೆ.23 ರಂದು ಬೆಳಿಗ್ಗೆ ಋಣ ಮೋಚನ ಯಾಗ, ಸಂಜೆ 5.30ಕ್ಕೆ ನಗರದಲ್ಲಿ ವಿಜೃಂಭಣೆಯ ವಿಸರ್ಜನಾ ಮೆರವಣಿಗೆ ನಡೆದು, ದೇವಾಲಯದ ಕಣ್ವ ಪುಷ್ಕರಣಿಯಲ್ಲಿ ವಿಗ್ರಹದ ಜಲಸ್ತಂಭನ ನಡೆಯಲಿದೆ.
ನಿತ್ಯವೂ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗಣಪತಿ ದೇವರಿಗೆ ವಿವಿಧ ಹರಕೆ ಸೇವೆಗಳು ನಡೆಯುತ್ತವೆ ಎಂದು ಕೃಷ್ಣಮೂರ್ತಿ ಆಚಾರ್ಯರು ತಿಳಿಸಿದ್ದಾರೆ.