ಸಾರಾಂಶ
ಉಡುಪಿ ನಗರಸಭೆಯ ನೂತನ ಅಧ್ಯಕ್ಷ ಪ್ರಭಾಕರ ಪೂಜಾರಿ ಶೋಭಾಯಾತ್ರೆಗೆ ಅಧಿಕೃತ ಚಾಲನೆ ನೀಡಿ ಶುಭ ಹಾರೈಸಿದರು. ಅರ್ಚಕರಾದ ದಾಮೋದರ್ ಭಟ್ ಕರಂಬಳ್ಳಿ ಧಾರ್ಮಿಕ ಪೂಜಾ ವಿಧಿಗಳನ್ನು, ಮಹಾಮಂಗಳಾರತಿ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಸಾರ್ವಜನಿಕ ಶ್ರೀ ಶಾರದೊತ್ಸವ ಸಮಿತಿಯ ವತಿಯಿಂದ ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ನಡೆದ 9ನೇ ವರ್ಷದ ಉಡುಪಿ ದಸರಾ ಮಹೋತ್ಸವದ ವಿಸರ್ಜನಾ ಶೋಭಾಯಾತ್ರೆಯ ಶನಿವಾರ ವೈಭವಯುತವಾಗಿ ನಡೆಯಿತು.ಉಡುಪಿ ನಗರಸಭೆಯ ನೂತನ ಅಧ್ಯಕ್ಷ ಪ್ರಭಾಕರ ಪೂಜಾರಿ ಶೋಭಾಯಾತ್ರೆಗೆ ಅಧಿಕೃತ ಚಾಲನೆ ನೀಡಿ ಶುಭ ಹಾರೈಸಿದರು. ಅರ್ಚಕರಾದ ದಾಮೋದರ್ ಭಟ್ ಕರಂಬಳ್ಳಿ ಧಾರ್ಮಿಕ ಪೂಜಾ ವಿಧಿಗಳನ್ನು, ಮಹಾಮಂಗಳಾರತಿ ನೆರವೇರಿಸಿದರು.
ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಉದ್ಯಮಿ ರವೀಂದ್ರ ಶೆಟ್ಟಿ, ನಗರಸಭಾ ಸದಸ್ಯರಾದ ವಿಜಯ ಕುಮಾರ್ ಕೊಡವೂರು, ಟಿ.ಜಿ. ಹೆಗಡೆ, ಬಿಜೆಪಿ ಮಹಿಳಾ ಮೋರ್ಚಾದ ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.ಶಾರದಾ ಮೊಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಮಟ್ಟು, ಉಪಾಧ್ಯಕ್ಷರಾದ ರಾಧಾಕೃಷ್ಣ ಮೆಂಡನ್ ಮಲ್ಪೆ, ಸುರೇಶ್ ಶೇರಿಗಾರ್, ಪದ್ಮಾ ರತ್ನಾಕರ್, ತಾರಾ ಉಮೇಶ್ ಆಚಾರ್ಯ ಮೊದಲಾದವರು ಶೋಭಾಯಾತ್ರೆಯ ನೇತೃತ್ವ ವಹಿಸಿದ್ದರು.
ನಂತರ ನಡೆದ ಶ್ರೀ ಶಾರದಾಮಾತೆಯ ಭವ್ಯ ವಿಸರ್ಜನಾ ಶೋಭಾಯಾತ್ರೆಯು ಮಂಗಳವಾದ್ಯ, ಚಂಡೆ, ಕುಣಿತಾ ಭಜನಾ ತಂಡಗಳು, ತಾಲೀಮ್ ಪ್ರದರ್ಶನ, ನಾಸಿಕ್ ಬ್ಯಾಂಡ್, ವೇದ ಘೋಷ, ಭಜನೆಯೊಂದಿಗೆ ಅಜ್ಜರಕಾಡು ಗೋವಿಂದ ಕಲ್ಯಾಣದಿಂದ ಹೊರಟು ಜೋಡುರಸ್ತೆ, ಬಿಗ್ ಬಜಾರ್, ಹಳೇ ಡಯಾನಾ ಸರ್ಕಲ್, ಕೆ.ಎಂ. ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಸಾಗಿ ಬಂದು ಬನ್ನಂಜೆಯ ಶ್ರೀ ಶಂಕರನಾರಾಯಣ ದೇವಳದ ಪದ್ಮಸರೋವರದಲ್ಲಿ ಜಲಸ್ತಂಭನ ನಡೆಸಲಾಯಿತು.