ವಿಜೃಂಭಣೆಯ ಶ್ರೀ ತೇರುಮಲ್ಲೇಶ್ವರ ಬ್ರಹ್ಮ ರಥೋತ್ಸವ

| Published : Feb 25 2024, 01:51 AM IST

ಸಾರಾಂಶ

ದಕ್ಷಿಣಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಹಿರಿಯೂರು ತಾಲೂಕಿನ ಬೀರೇನಹಳ್ಳಿ ಮಜುರೆ ವೀರ ಕರಿಯಣ್ಣ ದೇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬಿರು ಬಿಸಿಲನ್ನೂ ಲೆಕ್ಕಿಸದೆ ನಿಂತ ಸಾವಿರಾರು ಭಕ್ತರ ಸಮ್ಮುಖದಲ್ಲಿ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಮಾಘ ಮಾಸದ ಮಾಘದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ತೇರು ಎಳೆಯಲು ಪ್ರಾರಂಭಿಸಲಾಯಿತು. ತೇರಿಗೆ ಭಕ್ತರು ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸುವ ದೃಶ್ಯ ತೇರು ಸಾಗಿದ ದಾರಿ ಯುದ್ಧಕ್ಕೂ ಕಂಡು ಬಂತು. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದ ಜನರು ಕದಲದೆ ನಿಂತು ತೇರು ಸಾಗುವುದನ್ನು ಕಣ್ತುಂಬಿಕೊಂಡರು. ಶನಿವಾರ ಬೆಳಿಗ್ಗೆ ಶಿವಧನಸ್ಸಿಗೆ ಗಂಗಾಪೂಜೆ ಸಲ್ಲಿಸಿ ಗಂಗಾಸ್ನಾನ ನೆರವೇರಿಸಿ ಸ್ವಾಮಿಗೆ ಮಹಾಭಿಷೇಕ ನೆರವೇರಿಸಲಾಯಿತು.

ತಾಲೂಕಿನ ಬೀರೇನಹಳ್ಳಿ ಮಜುರೆ ವೀರ ಕರಿಯಣ್ಣ ದೇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಹೂವುಗಳು, ಅಲಂಕಾರಿಕ ಬಟ್ಟೆಗಳು ಹಾಗೂ ಬೃಹತ್ ಗಾತ್ರದ ಹಾರಗಳಿಂದ ಶೃಂಗಾರಗೊಂಡ ಬ್ರಹ್ಮ ರಥದಲ್ಲಿ ಸ್ವಾಮಿಯನ್ನು ಕೂರಿಸಿ ಮುಜರಾಯಿ ಅಧಿಕಾರಿಗಳು ಹಾಗೂ ತಹಶೀಲ್ದಾರ್ ರವರು ಪೂಜೆ ಸಲ್ಲಿಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ರವರು ಆಗಮಿಸಿ ಪೂಜೆ ಸಲ್ಲಿಸಿದ ನಂತರ ವಿವಿಧ ಗಣ್ಯರು ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟವನ್ನು ಹರಾಜು ಹಾಕಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನದಿಂದ ಹೊರಟ ರಥ ವಿವಿಧ ರೀತಿಯ ವಾದ್ಯಮೇಳಗಳು ಹಾಗೂ ಸಹಸ್ರಾರು ಜನರ ಭಕ್ತಿಯ ಸಮರ್ಪಣೆಯೊಂದಿಗೆ ವಾಸವಿ ರಸ್ತೆಯ ಮೂಲಕ ಸಿದ್ದನಾಯಕ ವೃತ್ತ ದವರೆಗೆ ಸರಾಗವಾಗಿ ಸಾಗಿತು. ತೇರು ಸಾಗುವ ದಾರಿಯುದ್ಧಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ರಥದಲ್ಲಿ ಕುಳ್ಳಿರಿಸಿದ್ದ ದೇವರಿಗೆ ಭಕ್ತರು ಬಾಳೆಹಣ್ಣು ಎಸೆಯುತ್ತಾ ಸಾಗಿ ತಮ್ಮ ಹರಕೆ, ಭಕ್ತಿ ಸಮರ್ಪಿಸಿದರು. ಬ್ರಹ್ಮ ರಥೋತ್ಸವದ ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ತೇರು ಸಾಗುವ ದಾರಿಯ ಎರಡೂ ಬದಿ ದಾನಿಗಳು ಭಕ್ತರಿಗೆ ಮಜ್ಜಿಗೆ, ಪಲಾಹಾರ, ನೀರು ವಿತರಿಸಿದರು. ಮುಸ್ಲಿಂ ಸಮುದಾಯದ ಬಂಧುಗಳು ಸಹ ಭಕ್ತರಿಗೆ ಮಜ್ಜಿಗೆ ವಿತರಿಸಿದ್ದು ವಿಶೇಷವಾಗಿತ್ತು.

ಸುಗಮ ಮತ್ತು ಸುರಕ್ಷಿತ ರಥೋತ್ಸವ ನಡೆಸುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ನಗರಸಭೆ ಮತ್ತು ಪೊಲೀಸ್ ಇಲಾಖೆ ಸೂಕ್ತ ರೀತಿಯ ವ್ಯವಸ್ಥೆ ಮಾಡಿದ್ದರು. ದೇವಸ್ಥಾನ ತಲುಪುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ದ್ವಿ ಚಕ್ರವಾಹನಗಳು ಮತ್ತು ಕಾರುಗಳನ್ನು ಒಳ ಬರದಂತೆ ನಿರ್ಬಂಧಿಸಲಾಗಿತ್ತು. ಹಾಗಾಗಿ ದೇವಸ್ಥಾನ ಮತ್ತು ತೇರು ಸಾಗುವ ದಾರಿಯಲ್ಲಿ ವಾಹನಗಳ ತೊಂದರೆ ಇಲ್ಲದೇ ಭಕ್ತರು ರಥೋತ್ಸವ ವನ್ನು ಸುಲಲಿತವಾಗಿ ವೀಕ್ಷಿಸಿದರು. ಸಿದ್ದನಾಯಕ ವೃತ್ತ ತಲುಪಿದ ನಂತರವು ಭಕ್ತರು ಸಂಜೆ ಯವರೆಗೆ ತಂಡೋಪತಂಡವಾಗಿ ಹೋಗಿ ತೇರಿಗೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸುವ ದೃಶ್ಯ ಸಾಮಾನ್ಯವಾಗಿತ್ತು.

ಮುಕ್ತಿ ಬಾವುಟ ಮತ್ತೆ ಸಚಿವರ ಪಾಲು

ರಥೋತ್ಸವ ಶುರುವಾಗುವ ಮುನ್ನ ನಡೆಯುವ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ಅತ್ಯಂತ ಕುತೂಹಲ ಕೆರಳಿಸಿತ್ತು. ತೇರು ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವದ ಮುಕ್ತಿ ಬಾವುಟದ ಹರಾಜು ಮರಳಿ ಸಚಿವ ಡಿ.ಸುಧಾಕರ್ ಪಾಲಾಯಿತು. ಕಳೆದ ವರ್ಷ ಮಾಜಿ ಸಚಿವರಾಗಿದ್ದ ಸುಧಾಕರ್ ರವರು ಹತ್ತು ಲಕ್ಷಕ್ಕೆ ಮುಕ್ತಿ ಬಾವುಟ ಕೂಗಿ ಪಡೆದಿ ದ್ದರು. ಈ ಬಾರಿ ಸಚಿವ ಸುಧಾಕರ್‌ರವರು ಬರೋಬ್ಬರಿ 18 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಪಡೆದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇ ಗೌಡ 9 ಲಕ್ಷ,ಬಿಜೆಪಿಯ ಎನ್ ಆರ್ ಲಕ್ಷ್ಮೀಕಾಂತ್ 11 ಲಕ್ಷ, ಕಂದಿಕೆರೆ ಜಗದೀಶ್ 17 ಲಕ್ಷಕ್ಕೆ ಕೂಗಿದ ನಂತರ ಕೊನೆಯದಾಗಿ 18 ಲಕ್ಷಕ್ಕೆ ಮುಕ್ತಿ ಬಾವುಟ ಸಚಿವರ ಪಾಲಾಯಿತು. ಮುಕ್ತಿ ಬಾವುಟ ಪಡೆದರೆ ಅಧಿಕಾರ, ಅಂತಸ್ತು, ಐಶ್ವರ್ಯ ವೃದ್ಧಿಸುತ್ತದೆ ಎಂಬ ಪ್ರತೀತಿ ಪದೇ ಪದೇ ಸತ್ಯವೆಂದು ಸಾಬೀತಾಗುತ್ತಿರುವುದರಿಂದ ಪ್ರತಿ ವರ್ಷವೂ ಮುಕ್ತಿ ಬಾವುಟ ಪಡೆಯಲು ಸ್ಪರ್ಧೆ ಏರ್ಪಡುತ್ತದೆ.