ಶೃಂಗೇರಿಯಲ್ಲಿ ಅದ್ಧೂರಿ ಶ್ರೀ ಶಾರದಾಂಬ ರಥೋತ್ಸವ

| Published : Oct 04 2025, 01:00 AM IST

ಸಾರಾಂಶ

ಪಶ್ಚಿಮ ಘಟ್ಟಗಳ ತಪ್ಪಲು, ಸಹ್ಯಾದ್ರಿ ಪರ್ವತಗಳ ಶ್ರೇಣಿ ತುಂಗೆಯ ತಟದಲ್ಲಿರುವ ಮಹರ್ಷಿ ವಿಭಾಂಡಕ ಮುನಿಗಳ ತಪೋಭೂಮಿ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವದ 12ನೇ ದಿನವಾದ ಶುಕ್ರವಾರ ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವಯುತವಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಪಶ್ಚಿಮ ಘಟ್ಟಗಳ ತಪ್ಪಲು, ಸಹ್ಯಾದ್ರಿ ಪರ್ವತಗಳ ಶ್ರೇಣಿ ತುಂಗೆಯ ತಟದಲ್ಲಿರುವ ಮಹರ್ಷಿ ವಿಭಾಂಡಕ ಮುನಿಗಳ ತಪೋಭೂಮಿ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವದ 12ನೇ ದಿನವಾದ ಶುಕ್ರವಾರ ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವಯುತವಾಗಿ ಜರುಗಿತು.

ಕಳೆದೆರೆಡು ದಿನಗಳಿಂದ ಶೃಂಗೇರಿ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದ್ದರೂ ಶುಕ್ರವಾರ ಬೆಳಿಗ್ಗೆಯಿಂದಲೇ ಬಿಸಿಲು, ಮೋಡ ಕವಿದ ವಾತಾವರಣ ಕಂಡುಬಂದಿತು. ನವರಾತ್ರಿ ಉತ್ಸವದಲ್ಲಿ 11 ಅಲಂಕಾರಗಳಲ್ಲಿ ಭಕ್ತರನ್ನು ಅನುಗ್ರಹಿಸಿದ ಶಾರದೆ ಶುಕ್ರವಾರ ಗಜಲಕ್ಷ್ಮಿ ಅಲಂಕಾರದಲ್ಲಿ ರಥಾರೋಹಣ ಮಾಡಿ ರಾಜಬೀದಿಯಲ್ಲಿ ಸಾಗುತ್ತಿರುವ ದೃಶ್ಯ ನಯನ ಮನೋಹರವಾಗಿತ್ತು.

ಸಕಲ ರಾಜಲಾಂಛನಗಳೊಂದಿಗೆ ಜಗದ್ಗುರು ವಿಧುಶೇಖರಭಾರತೀ ತೀರ್ಥ ಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಅತ್ಯಂತ ವೈಭವಯುತವಾಗಿ ಜರುಗಿತು. ರಾಜಲಾಂಛನ, ಛತ್ರಿ ಚಾಮರ, ವಾದ್ಯಮೇಳಗಳೊಂದಿಗೆ ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳು ರಥದಲ್ಲಿದ್ದ ಶಾರದಾಂಬೆ ಎದುರು ಸಾಗುತ್ತಿದ್ದಾಗ ನೆರೆದಿದ್ದ ಸಹಸ್ರಾರು ಭಕ್ತರಲ್ಲಿ ಸಂಭ್ರಮದ ಹೊಳೆ ಹರಿಯಿತು.

ಹಗಲು ದೀವಟಿಗೆ, ಮಕರ ತೋರಣ, ಶ್ವೇತ ಛತ್ರಿ, ಅಶ್ವ, ಗಜರಾಜಗಳೊಂದಿಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಹಲವು ಜಾನಪದ ತಂಡಗಳು, ವಿವಿಧ ಸ್ತಬ್ಧಚಿತ್ರಗಳು ಮೆರುಗು ನೀಡಿದವು. ವಿವಿಧ ಭಜನಾ ತಂಡಗಳ ಭಜನೆಗಳು, ವೇದಮಂತ್ರಗಳ ಪಠಣ, ಜಾನಪದ ಸೊಗಡು ಸಾರುವ ಅವಿಭಕ್ತ ಕುಟುಂಬ, ಕೃಷಿ ಕಾಯದಲ್ಲಿರುವ ಸ್ತಬ್ಧಚಿತ್ರ, ಕುಂಬಾರಿಕೆ ವೃತ್ತಿಯಲ್ಲಿರುವ ಸ್ತಬ್ದಚಿತ್ರ, ತಾಯಿ ಭವನೇಶ್ವರಿ, ಶ್ರೀ ಶಾರದಾಂಬೆ, ಮಹಿಷಾಸುರ, ಚಾಮುಂಡೇಶ್ವರಿ, ವಿವಿಧ ದೇವತೆಗಳ ಸ್ತಬ್ಧಚಿತ್ರ, ಹುಲಿವೇಷದಾರಿಗಳ ಕುಣಿತ, ಮರಗಾಲು ನೃತ್ಯ, ಬೆಸ್ತರ ಕಾಯಕ ಸ್ತಬ್ದ ಚಿತ್ರ, ಶಿವ ಕೈಲಾಸ ಸ್ತಬ್ಧಚಿತ್ರ, ಶಿವಲಿಂಗ, ಶ್ರೀ ಶಂಕರಾಚಾರ್ಯ ಜೀವನ, ತಟ್ಟಿರಾಯ ಹೀಗೆ ಅನೇಕ ಸ್ತಬ್ಧ ಚಿತ್ರಗಳು ಆಕರ್ಷಣೀಯವಾಗಿತ್ತು.

ಪಲ್ಲಕ್ಕಿ ಹೊತ್ತ ವಿಪ್ರೋಕತ್ತಮರ, ಭಕ್ತರ ವೇದಘೋಷಗಳು, ಮಂತ್ರ ಘೋಷಗಳು, ನೆರೆದಿದ್ದ ಸಹಸ್ರಾರು ಭಕ್ತರ ಜೈಕಾರಗಳು ಇಡೀ ವಾತಾವರಣಕ್ಕೆ ಅಲೌಕಿಕತೆ ತಂದಿತ್ತು. ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರ ದರ್ಶನ ಪಡೆದು ಧನ್ಯತಾ ಭಾವದಿಂದ ಪುನೀತರಾದರು. ರಥ ಬೀದಿಯಲ್ಲಿ ಸಾಗಿದ ಮಹಾರಥೋತ್ಸವದಲ್ಲಿ ಶ್ರೀ ಮಠದ ಆನೆಗಳಾದ ಲಕ್ಷಮಿ, ಜಯಲಕ್ಷ್ಮಿ, ಅಶ್ವಗಳಾದ ಅರ್ಜುನ, ಅಭಿಮನ್ಯು ಮಹಿಳಾ ತಂಡಗಳ ಭಜನೆಗಳು, ಮಕ್ಕಳ ನೃತ್ಯಗಳು ಮೆರವಣಿಗೆ ಕಳೆಗಟ್ಟಿದವು.

ರಂಗೋಲಿ ಚಿತ್ತಾರ:

ರಥ ಬೀದಿಯಲ್ಲಿ ರಥ ಸಾಗುವ ದಾರಿಯುದ್ದಕ್ಕೂ ಇರುವ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಸ್ವಚ್ಛಗೊಳಿಸಿದ ರಸ್ತೆಯಲ್ಲಿ ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು.

ಹರಿದು ಬಂದ ಜನಸಾಗರ:

ಬೆಳಿಗ್ಗೆಯಿಂದ ಮೋಡ, ಬಿಸಿಲ ವಾತಾವರಣವಿದ್ದು ಮಹಾರತೋಥ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ವೀಕ್ಷಿಸಲು ಉತ್ಸುಕತೆ ಹೊಂದಿದ್ದ ಭಕ್ತರು ಬೆಳಿಗ್ಗೆಯಿಂದಲೇ ಶೃಂಗೇರಿಯತ್ತ ಸಾಗಿ ಬರತೊಡಗಿದ್ದರು. ರಥೋತ್ಸವ ಆರಂಭವಾಗುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತು. ಶೃಂಗೇರಿ ಬಸ್ ನಿಲ್ದಾಣದಿಂದ ವೆಲ್ ಕಂ ಗೇಟ್, ಕೆವಿಆರ್ ವೃತ್ತ, ಬೈಪಾಸ್ ರಸ್ತೆ, ಗಾಂದಿ ಮೈದಾನ ಎಲ್ಲೆಡೆ ವಾಹನ ದಟ್ಟಣೆ, ಜನ ಸಂದಣಿ ತುಂಬಿತು. ಕಿಲೋ ಮೀಟರ್‌ಗಟ್ಟಲೆ ನಿಂತಿದ್ದ ಸಾಲು ಸಾಲು ವಾಹನಗಳು, ಶ್ರೀ ಮಠದ ಆವರಣ, ನರಸಿಂಹ ವನ, ಭಾರತೀ ಬೀದಿ ಎಲ್ಲೆಲ್ಲೂ ಜನಸಾಗರವೇ ತುಂಬಿತು.

ಮಹಾರಥೋತ್ಸವದ ನಂತರ ಶಾರದಾಂಬೆಯ ಉತ್ಸವ ಮೂರ್ತಿಯನ್ನು ಅಡ್ಡೆಯಲ್ಲಿ ಮತ್ತು ಬಲಿ ಮೂರ್ತಿಯನ್ನು ತಲೆಯಲ್ಲಿ ಹೊತ್ತು ದೇವಸ್ಥಾನದ ಪ್ರಾಂಗಣದಲ್ಲಿ ತ್ರಿಪ್ರದಕ್ಷಿಣೆ ಬಂದಾಗ ರಾಜಪೋಷಾಕು ಧರಿಸಿದ್ದ ಜಗದ್ಗುರುಗಳು ಹಿಮ್ಮುಖವಾಗಿ ಹೆಜ್ಜೆ ಹಾಕಿದರು. ನವರಾತ್ರಿಯ ಪ್ರತೀ ದಿನ ರಾತ್ರಿ ನಡೆಯುತ್ತಿದ್ದ ದಸರಾ ಐತಿಹಾಸಿಕ ದರ್ಬಾರ್ ಶುಕ್ರವಾರ ಹಗಲು ದರ್ಬಾರ್ ಆಯಿತು.

ಮುಂದಿನ ಮೂರುದಿನಗಳ ಕಾಲ ಶಾರದೆ ಭುವನೇಶ್ವರಿಯಾಗಿ,ಕಾಮಧೇನು, ಇಂದ್ರಾಣಿಯಾಗಿ ವಿಜೃಂಭಿಸುವಳು, ಭೂಮಿ ಹುಣ್ಣಿಮೆಯಂದು ಶಾರದೆಗೆ ಮತ್ತೆ ಮಹಾಭಿಷೇಕ ನಡೆಯಲಿದ್ದು, ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಅಂದಿನ ಎಲ್ಲಾ ಕಾರ್ಯಕ್ರಮಗಳೊಂದಿಗೆ ಶರನ್ವವರಾತ್ರಿಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತವೆ.