ಐತಿಹಾಸಿಕ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಅಡಿಕೃತ್ತಿಕೆ ಜಾತ್ರಾ ಮಹೋತ್ಸವವು ನೂರಾರು ಭಕ್ತರ ಭಕ್ತಿ-ಸಂಭ್ರಮದ ನಡುವೆ ವಿಜೃಂಭಣೆಯಿಂದ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ಸಲ್ಲಿಸಿದರು. ರಥೋತ್ಸವದ ಬಳಿಕ ಸಿಡಿಮದ್ದುಗಳ ಪ್ರದರ್ಶನ ಜರುಗಿದ್ದು, ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ಜಾತ್ರೆಗೆ ಸಾಕ್ಷಿಯಾದರು. ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
ಅರಸೀಕೆರೆ: ತಾಲೂಕಿನ ಐತಿಹಾಸಿಕ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಅಡಿಕೃತ್ತಿಕೆ ಜಾತ್ರಾ ಮಹೋತ್ಸವವು ನೂರಾರು ಭಕ್ತರ ಭಕ್ತಿ-ಸಂಭ್ರಮದ ನಡುವೆ ವಿಜೃಂಭಣೆಯಿಂದ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ಸಲ್ಲಿಸಿದರು.ಪ್ರಾತಃಕಾಲದಿಂದಲೇ ಪೂಜಾ ಕೈಂಕರ್ಯಗಳು, ಹೋಮ-ಹವನಗಳು ಹಾಗೂ ಲೋಕ ಕಲ್ಯಾಣಾರ್ಥ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಶ್ರೀಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.ಮಧ್ಯಾಹ್ನ ಅನೇಕ ಭಕ್ತರು ಕಾವಡಿ ಉತ್ಸವದಲ್ಲಿ ಭಾಗವಹಿಸಿ ತಮ್ಮ ಹರಕೆಗಳನ್ನು ತೀರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ರಥೋತ್ಸವ ರಾತ್ರಿ 8 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಭಕ್ತಿಭಾವದಿಂದ ನಡೆಯಿತು. ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದ ದೇವಾಲಯ ಹಾಗೂ ರಥವು ಭಕ್ತರ ಗಮನ ಸೆಳೆಯಿತು.ರಥೋತ್ಸವದ ಬಳಿಕ ಸಿಡಿಮದ್ದುಗಳ ಪ್ರದರ್ಶನ ಜರುಗಿದ್ದು, ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ಜಾತ್ರೆಗೆ ಸಾಕ್ಷಿಯಾದರು. ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.ಜಾತ್ರೆಯ ಅಂಗವಾಗಿ ಆ. 8ರಂದು ನಗರದ ಪ್ರಮುಖ ರಾಜಬೀದಿಗಳಲ್ಲಿ ಭದ್ರಾವತಿಯ ಪಳನಿಸ್ವಾಮಿಯವರ ನೇತೃತ್ವದಲ್ಲಿ ಪಂಚವಾದ್ಯದೊಂದಿಗೆ ಶ್ರೀಸ್ವಾಮಿಯ ಉತ್ಸವ ಮೆರವಣಿಗೆ ನಡೆಯಲಿದೆ. ಭಕ್ತರು ತಮ್ಮ ಮನೆಗಳ ಮುಂಭಾಗ ತಳಿರು ತೋರಣ, ರಂಗೋಲಿ ಹಾಗೂ ಹೂವಿನ ಅಲಂಕಾರಗಳಿಂದ ಸಿಂಗಾರ ಮಾಡಿ ಶ್ರೀಸ್ವಾಮಿಯನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸುವಂತೆ ದೇವಸ್ಥಾನ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ.