ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಕಾರವಾರ ನಗರದಲ್ಲಿ ಗುರುವಾರ ಅದ್ಧೂರಿಯಾಗಿ ತಿರಂಗಾ ಯಾತ್ರೆ ಹಾಗೂ ಬೈಕ್ ರ‍್ಯಾಲಿ ನಡೆಯಿತು. ಹರ್ ಘರ್ ತಿರಂಗಾ ರಾಜ್ಯ ಸಂಚಾಲಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಪಾಲ್ಗೊಂಡು ಯಾತ್ರೆಗೆ ವಿಶೇಷ ಮೆರುಗು ನೀಡಿದರು.
ಕನ್ನಡಪ್ರಭ ವಾರ್ತೆ ಕಾರವಾರ
ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಕಾರವಾರ ನಗರದಲ್ಲಿ ಗುರುವಾರ ಅದ್ಧೂರಿಯಾಗಿ ತಿರಂಗಾ ಯಾತ್ರೆ ಹಾಗೂ ಬೈಕ್ ರ‍್ಯಾಲಿ ನಡೆಯಿತು. ಹರ್ ಘರ್ ತಿರಂಗಾ ರಾಜ್ಯ ಸಂಚಾಲಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಪಾಲ್ಗೊಂಡು ಯಾತ್ರೆಗೆ ವಿಶೇಷ ಮೆರುಗು ನೀಡಿದರು.ನಗರದ ಮಾಲಾದೇವಿ ಮೈದಾನದಿಂದ ಆರಂಭಗೊಂಡ ತಿರಂಗಾ ಯಾತ್ರೆಯಲ್ಲಿ ರಾಷ್ಟ್ರಧ್ವಜ ಹಿಡಿದ ಬೈಕ್‌ಗಳು ಹಾಗೂ ವಾಹನಗಳು ಶಿಸ್ತುಬದ್ಧವಾಗಿ ಕೋಡಿಭಾಗದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ಬಳಿಕ ಕಾರವಾರ ನಗರದ ವಿವಿಧೆಡೆ ಸಾಗಿದವು. ನಂತರ ಮಾಲಾದೇವಿ ಮೈದಾನದಲ್ಲಿ ಯಾತ್ರೆ ಸಮಾರೋಪಗೊಂಡಿತು. ಯಾತ್ರೆಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಮಹಿಳೆಯರು ಹಾಗೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ರೂಪಾಲಿ ಎಸ್.ನಾಯ್ಕ, ಹರ್ ಘರ್ ತಿರಂಗಾ ರಾಜ್ಯ ಸಂಚಾಲಕಿಯಾಗಿ ರಾಜ್ಯದ ವಿವಿಧೆಡೆ ನಡೆದ ಯಾತ್ರೆಗಳಲ್ಲಿ ಭಾಗವಹಿಸಿದ್ದೇನೆ. ಪುತ್ತೂರಿನಲ್ಲಿ ಭಾರಿ ಮಳೆಯ ನಡುವೆಯೂ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಪಸ್ಥಿತಿಯಲ್ಲಿ ಅದ್ಧೂರಿ ತಿರಂಗಾ ಯಾತ್ರೆ ನಡೆದಿತ್ತು. ಇದೀಗ ಕಾರವಾರದಲ್ಲಿ ನಡೆದ ಯಾತ್ರೆಯೂ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದರು.ದೇಶ ಸದೃಢವಾಗಿದ್ದರೆ ಪ್ರತಿಯೊಬ್ಬರೂ ಬಲಿಷ್ಠರಾಗಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಹೊಂದಿದ್ದು, ಆ ಸಂಕಲ್ಪಕ್ಕೆ ಎಲ್ಲರೂ ಬೆಂಬಲವಾಗಿ ನಿಂತು ದೇಶಸೇವೆ ಮಾಡಬೇಕು ಎಂದು ಕರೆ ನೀಡಿದರು.
ರ‍್ಯಾಲಿಯಲ್ಲಿ ಪಾಲ್ಗೊಂಡ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಗರ ಹಾಗೂ ಗ್ರಾಮೀಣ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ನಾಗರಿಕರು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ರೂಪಾಲಿ ಎಸ್. ನಾಯ್ಕ ಧನ್ಯವಾದ ಸಲ್ಲಿಸಿದರು.ಯೋಗ ಶಿಕ್ಷಕ ಪ್ರಶಾಂತ ರೇವಣಕರ, ನಾಗೇಶ ಕುರ್ಡೇಕರ, ಸುಭಾಷ್ ಗುನಗಿ, ರವಿರಾಜ ಅಂಕೋಲೆಕರ ಮತ್ತಿತರರು ಇದ್ದರು.
