ಉಡುಪಿ: ತಮ್ಮ ಚತುರ್ಥ ಪರ್ಯಾಯವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ನಂತರ ಮೊದಲ ಬಾರಿಗೆ ಕೆನಡಾ ದೇಶಕ್ಕೆ ಆಗಮಿಸಿದ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ನೂರಾರು ಮಂದಿ ಭಕ್ತರು ಟೊರೊಂಟೋ ಮಹಾನಗರದಲ್ಲಿ ಗೌರವಾದರಗಳೊಂದಿಗೆ ಬರಮಾಡಿಕೊಂಡರು. ಗೀತಾ ಪಾರಾಯಣ, ಭಜನೆ, ಭರತನಾಟ್ಯ ಮತ್ತು ವೇದಘೋಷಗಳೊಂದಿಗೆ ಶ್ರೀಪಾದರನ್ನು ಸ್ವಾಗತಿಸಲಾಯಿತು.ಈ ಸಂದರ್ಭ ಸ್ಥಳೀಯಾಡಳಿತ ವತಿಯಿಂದ ಶ್ರೀಗಳಿಗೆ ಪೌರ ಸಮ್ಮಾನ ನೀಡಲಾಯಿತು. ಸ್ಥಳೀಯ ಸಂಸದೆ ಮತ್ತು ಕೇಂದ್ರ ಸಚಿವೆ ಕಿಸ್ಟಿನಾ ಡೆರ್ಕ್ ಸನ್ ಅವರು ಕೆನಡಾ ಸರ್ಕಾರದ ಪರವಾಗಿ ಶ್ರೀಗಳಿಗೆ ಅಭಿನಂದನಾ ಪತ್ರ ಸಮರ್ಪಿಸಿದರು.ನಂತರ ಮಾತನಾಡಿದ ಸಚಿವೆ ಕ್ರಿಸ್ಟಿನಾ ಪೂಜ್ಯಶ್ರೀಪಾದರು ವಿಶ್ವದಾದ್ಯಂತ ಸಂಚರಿಸಿ ಶಾಂತಿ ಮತ್ತು ಸೌಹಾರ್ದತೆಯನ್ನು ಪಸರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. ಟೊರೊಂಟೋ ಮಹಾನಗರದ ಪುರಸಭೆಯ ಕೌನ್ಸಿಲರ್ ಜೇಸನ್ ಉಪಸ್ಥಿತರಿದ್ದರು.

ಆಶೀರ್ವಚನ ನೀಡಿದ ಶ್ರೀಪಾದರು, ಭಕ್ತಿಗಿಂತ ಮಿಗಿಲಾದ ಶಕ್ತಿ ಈ ಭೂಮಿಯಲ್ಲಿ ಮತ್ತೊಂದಿಲ್ಲ. ದೇವರ ಅನುಗ್ರಹವನ್ನು ಸಂಪಾದಿಸಿದವರಿಗೆ ಅಸಾಧ್ಯ ಎಂಬುವುದೇ ಇಲ್ಲ. ಅದೇ ನಮ್ಮ ಎಲ್ಲ ಯಶಸ್ಸುಗಳ ಹಿಂದಿರುವ ಸತ್ಯ ಎಂದರು.ಕೆನಡಾದ ಭಾರತೀಯ ಭಕ್ತರ ಪರವಾಗಿ ಜಗನ್ನಾಥ ರಾವ್, ರಮೇಶ್ ಬೆಂಗಳೂರು ಮತ್ತು ಜ್ಞಾನಚಂದ್ರನ್ ರಾಸಲಿಂಗಂ ಅವರು ಮಾತನಾಡಿ, ತಮ್ಮ ನುಡಿನಮನಗಳನ್ನು ಸಲ್ಲಿಸಿದರು. ಡಾ. ಯೋಗೀಂದ್ರ ಭಟ್ ಉಳಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರತ್ನ ಮತ್ತು ಹರೀಶ್ ರಾವ್ ಶ್ರೀಮಠದ ಪ್ರಾಸ್ತಾವಿತ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಭೆಗೆ ವಿವರಿಸಿದರು. ಶ್ರೀಮಠದ ಪ್ರ. ಅರ್ಚಕ ರಾಘವೇಂದ್ರ ದೇಸಾಯಿ, ಸಂದೇಶ್ ಮೂಡತ್ತಾಯ, ಚಿಂತನ್ ವೇದಘೋಷ ಮಾಡಿದರು. ಸುಜಾತಾ ನರಸಿಂಹ, ವೀಣಾ ಕವಳೆ, ಕಿಶೋರ್ ಶೆಟ್ಟಿ, ನಿತಿನ್ ರಾವ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಅಕ್ಷಯ್ ನಿರೂಪಿಸಿದರು.