ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ಗೋಕರ್ಣಕ್ಕೆ ಆಗಮಿಸಿದ ವೇಳೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು ಹೂಗುಚ್ಛ ನೀಡಿ ಬರಮಾಡಿಕೊಂಡರು.

ಗೋಕರ್ಣ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶುಕ್ರವಾರ ಇಲ್ಲಿಗೆ ಆಗಮಿಸಿದ ವೇಳೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಮುಂಜಾನೆ ೯.೩೦ ಆಗಮನ ಎಂದು ಸಮಯ ನಿಗದಿಯಾಗಿತ್ತು. ಆದರೆ ೧೦.೩೦ಕ್ಕೆ ಆಗಮಿಸಿದರು.

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ, ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹೂಗುಚ್ಛ ನೀಡಿ ಬರಮಾಡಿಕೊಂಡರು.

ಅವರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ, ಪಕ್ಷದ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವಕರ, ತಾಲೂಕಾಧ್ಯಕ್ಷ ಭುವನ ಭಾಗ್ವತ್, ರಾಜ್ಯ ಪ್ರಮುಖರಾದ ಸುಷ್ಮಾ ರೆಡ್ಡಿ, ಅನುವಂಶೀಯ ಉಪಾಧಿವಂತ ಮಂಡಲದ ಅಧ್ಯಕ್ಷ ವೇ. ರಾಜಗೋಪಾಲ ಅಡಿಗುರೂಜಿ, ಪಕ್ಷದ ಸ್ಥಳೀಯ ಪ್ರಮುಖರಾದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ, ಉದ್ಯಮಿ ಮೋಹನ ನಾಯಕ, ನಾಗರಾಜ ಹಿತ್ತಲಮಕ್ಕಿ, ಹೊನ್ನಪ್ಪ ನಾಯಕ, ಹನೀಫ್ ಸಾಬ್ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಪಕ್ಷದ ಪ್ರಮುಖರು ಹಾಜರಿದ್ದು, ಆತ್ಮೀಯವಾಗಿ ಸ್ವಾಗತಿಸಿದರು.

ಸಿದ್ಧೇಶ್ವರದ ವರೆಗೆ ತೆರಳಿ ಮರಳಿ ಮಹಾಬಲೇಶ್ವರ ಮಂದಿರಕ್ಕೆ: ಮುಂಜಾನೆ ಇಲ್ಲಿಗೆ ಆಗಮಿಸಿದ ಆನಂತರ ಓಂ ಕಡಲ ತೀರದಲ್ಲಿರುವ ಖಾಸಗಿ ರೆಸಾರ್ಟ್‌ಗೆ ತೆರಳಿ ತುಸು ವಿಶ್ರಾಂತಿ ಪಡೆದು, ಆನಂತರ ಆಂದ್ಲೆ ಜಗದೀಶ್ವರಿ ಮಂದಿರಕ್ಕೆ ಹೊರಟಿದ್ದರು. ಆದರೆ ಇಲ್ಲಿನ ಮಹಾಬಲೇಶ್ವರ ಮಂದಿರದ ಸಮಯ ವಿಚಾರಿಸಿ, ಸಿದ್ಧೇಶ್ವರ ಬಳಿ ಹೋದವರು ವಾಪಸ್‌ ಮಹಾಬಲೇಶ್ವರ ಮಂದಿರಕ್ಕೆ ಬಂದು, ಪೂಜೆ ಸಲ್ಲಿಸಿ ತೆರಳಿದರು.

ಬಳಿಕ ಅಂಕೋಲಾ ತಾಲೂಕಿನ ಆಂದ್ಲೆಯ ಶ್ರೀ ಜಗದೇಶ್ವರಿ ದೇವಸ್ಥಾನಕ್ಕೆ ತೆರಳಿ ಸಂಕಷ್ಟಹರಣ ಹಾಗೂ ಇಷ್ಟಾರ್ಥಸಿದ್ಧಿ ಕಾಳರಾತ್ರಿ ಎಳ್ಳು ಅಮಾವಾಸ್ಯೆ ಮಾಲೆ ಪೂಜೆಯಲ್ಲಿ ಪಾಲ್ಗೊಂಡು ಧನ್ಯತೆ ಮರೆದರು.