ಯೋಧರು ತಮ್ಮ ಪ್ರಾಣ ಲೆಕ್ಕಿಸದೆ ಗಾಳಿ, ಬಿಸಿಲು, ಮಳೆ ಎನ್ನದೆ ದೇಶಕ್ಕಾಗಿ ಶ್ರಮ ವಹಿಸುತ್ತಾರೆ
ಕುಷ್ಟಗಿ: ಸತತ 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಯೋಧನಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ತಾಲೂಕಿನ ನಿಲೋಗಲ್ ಗ್ರಾಮದ ಯೋಧ ಮಲ್ಲಪ್ಪ ವೈ ಬಳೂಟಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ನಂತರ ಕಾಲ್ನಡಿಗೆಯ ಜಾಥಾ ಮೂಲಕ ನಿವೃತ್ತ ಯೋಧ ಮಲ್ಲಪ್ಪ ವೈ ಬಳೂಟಗಿ ಅವರನ್ನು ತೆರೆದ ವಾಹನದಲ್ಲಿ ಜಯಘೋಷಗಳೊಂದಿಗೆ ಪ್ರೌಢಶಾಲೆಯಿಂದ ಬನ್ನಿಕಟ್ಟೆ ಆವರಣದಲ್ಲಿ ನಿರ್ಮಿಸಲಾಗಿದ್ದ ಭವ್ಯವೇದಿಕೆಯವರೆಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.
ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ನಿಲೋಗಲ್ ಗ್ರಾಮದ ನೌಕರ ಬಳಗ, ಮಾಜಿ ಹಾಗೂ ಹಾಲಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಶಿಕ್ಷಕರು, ಗ್ರಾಮದ ಗುರು ಹಿರಿಯರು ಯುವಕರು ಹೂಮಳೆ ಸುರಿಸಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ನಿಲೋಗಲ್ ಗ್ರಾಮದ ನೌಕರ ಸಂಘದ ಅಧ್ಯಕ್ಷ ಮಾರುತಿ ದಮ್ಮೂರು ಮಾತನಾಡಿ, ಯೋಧರು ತಮ್ಮ ಪ್ರಾಣ ಲೆಕ್ಕಿಸದೆ ಗಾಳಿ, ಬಿಸಿಲು, ಮಳೆ ಎನ್ನದೆ ದೇಶಕ್ಕಾಗಿ ಶ್ರಮ ವಹಿಸುತ್ತಾರೆ. ಗಡಿಯಲ್ಲಿ ನಮ್ಮನ್ನು ಕಾಯ್ದು ನಿವೃತ್ತಿ ಹೊಂದಿ ಸಾಮಾಜಿಕ ಜೀವನದಲ್ಲಿ ಭಾಗವಹಿಸುತ್ತಾರೆ. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಸಾರ್ವಜನಿಕರು ಹಾಗೂ ದೇಶಭಕ್ತರು ಅವರ ಜತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ತಿಳಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ಮಲ್ಲಪ್ಪ ಬಳೂಟಗಿ ಮಾತನಾಡಿ, ದೇಶ ಕಾಯುವ ಯೋಗ ನನಗೆ ಸಿಕ್ಕಿದ್ದು ಭಾಗ್ಯವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಸೈನಿಕರಾಗಲು ಉತ್ತೇಜನ ನೀಡಬೇಕು ಎಂದರು.ಶಿಕ್ಷಕ ಜೀವನಸಾಬ್ ವಾಲಿಕಾರ ಯೋಧರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಗದಗ, ಬಾಗಲಕೋಟೆ, ರೋಣ, ಹನಮನಾಳ ಚಳಗೇರಿಯ ಮಾಜಿ ಯೋಧರು, ಸ್ಥಳೀಯ ಗ್ರಾಪಂ ಅಧ್ಯಕ್ಷ ಮಲ್ಲವ್ವ ತಳವಾರ, ಮಲ್ಲಪ್ಪ ಹೂಗಾರ, ಯಮನೂರಪ್ಪ ಬಳೂಟಗಿ, ಅಡಿವೆಪ್ಪ ಅಂಗಡಿ, ಯಮನಪ್ಪ ಗಾಜಿ, ಮಲ್ಲಪ್ಪ ದಮ್ಮೂರ, ಶರಣಯ್ಯ ಪಾಪನಾಳ, ಮಲ್ಲಿಕಾರ್ಜುನಗೌಡ ಪಾಟೀಲ, ಭೀಮನಗೌಡ ಪಾಟೀಲ, ಖಾಜೆ ಸಾಬ್ ಗೊಲ್ಲಬಾಯಿ, ಕನಕಪ್ಪ ಭಂಡಾರಿ, ಬಾಬುಸಾಬ್ ಗೊಲ್ಲಬಾಯಿ, ರಾಮಣ್ಣ ಗುಜ್ಜಲ್, ಆನಂದ ಬಸ್ತಿ, ಮುತ್ತಣ್ಣ ಹೂಗಾರ, ಹನಮಂತ ಪೂಜಾರ, ಬಸವರಾಜ ಹನಮನಹಾಳ, ಶರಣಪ್ಪ ಹಾಬಲಕಟ್ಟಿ, ಸಂಗಮೇಶ ಇಲಚಿ, ಮಂಜು ಬಳೂಟಗಿ, ಮಹಾಂತೇಶ ತಳವಾರ, ಬಸವರಾಜ ಭಂಡಾರಿ, ಹಸನ್ ಡೊಂಗ್ರಿ ಸೇರಿದಂತೆ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು, ಮಕ್ಕಳು ಯುವಕರು ಇದ್ದರು.