ಸಾರಾಂಶ
ಭಾರತೀನಗರ: ಅಪಘಾತದಲ್ಲಿ ಗಾಯಗೊಂಡವರನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕಳುಹಿಸಿ ತಾವು ಸ್ಕೂಟರ್ ಏರಿ ಚಿಕಿತ್ಸೆ ಕೊಡಿಸಲು ನೆರವಾದ ಘಟನೆ ತಾಲೂಕಿನ ತಿಟ್ಟಮಾರನಹಳ್ಳಿ ಗೇಟ್ ಬಳಿ ಜರುಗಿತು.
ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಳವಳ್ಳಿ ತಾಲೂಕಿನ ಕೋರೆಗಾಲದ ಮರಿತಾಯಮ್ಮ ಮತ್ತು ಮೊಮ್ಮಗ ವೈದಿಕ್‌ಗೌಡ ಅವರಿಗೆ ಹಿಂದಿನಿಂದ ಬೈಕ್ ಸವಾರ ದೊಡ್ಡ ಆಲಹಳ್ಳಿ ಹೇಮಂತ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ದೊಡ್ಡಆಲಹಳ್ಳಿ ಸವಿತಾ ಸೇರಿ 4 ಮಂದಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ.ಈ ವೇಳೆ ಮಾರ್ಗ ಮಧ್ಯೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಮ್ಮ ಕಾರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ರಸ್ತೆ ಬದಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ಗಾಯಾಳುಗಳನ್ನು ಕಂಡು ತಕ್ಷಣ ಕಾರನ್ನು ನಿಲ್ಲಿಸಿ ಕೆಳಗಿಳಿದು ಗಾಯಾಳುಗಳನ್ನು ತಮ್ಮದೆ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿ ಸಂಬಂಧಿಸಿದ ವೈದ್ಯರಿಗೆ ದೂರವಾಣಿ ಕರೆ ಮಾಡಿ ಚಿಕಿತ್ಸೆಗೆ ಸೂಚಿಸಿ ಮಾನವೀಯತೆ ನೆರೆದಿದ್ದಾರೆ.
ಆಸ್ಪತ್ರೆಗೆ ಕಾರನ್ನು ಕಳುಹಿಸಿದ ನಂತರ ತಿಟ್ಟಮಾರನಹಳ್ಳಿ ಮಾರ್ಗದಲ್ಲಿ ತೆರಳುತ್ತಿದ್ದ ಬೈಕ್ ಸವಾರನ ಜೊತೆ ಹಿಂದಿನ ಸೀಟಿನಲ್ಲಿ ಕುಳಿತು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಲು ತೆರಳಿದರು.ಕೋರೆಗಾಲದ ಮರಿತಾಯಮ್ಮ(45) ಅವರಿಗೆ ಕಾಲಿನ ಮೂಳೆ ಮುರಿದಿದ್ದು, ಮೊಮ್ಮಗ ವೈದಿಕ್‌ಗೌಡ(6) ಅವರಿಗೆ ತಲೆಗೆ ಪೆಟ್ಟು ಬಿದ್ದಿದೆ. ಬೈಕ್‌ನಲ್ಲಿದ್ದ ಸವಿತ(46) ಮತ್ತು ಹೇಮಂತ್(25) ಅವರಿಗೂ ಗಂಭೀರವಾಗಿ ಗಾಯಗೊಂಡ ಪರಿಣಾಮ ಜೆಡಿಎಸ್ ಕಾರ್ಯಕರ್ತ ಅಣ್ಣೂರು ವಿನುಕುಮಾರ್, ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಭಾನುವಾರ ಮಧ್ಯಾಹ್ನ 3 ಗಂಟೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದರು.