ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೇವಲ 40 ದಿನದ ಹಸುಗೂಸನ್ನು ಕತ್ತು ಹಿಸುಕಿ ಹತ್ಯೆಗೈದಿದ್ದ ಅಜ್ಜಿಯನ್ನು ಜಿಲ್ಲೆಯ ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 2025ರ ಡಿಸೆಂಬರ್ 24ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಫ್ಎಸ್ಎಲ್ ವರದಿಯಲ್ಲಿ ಮಗುವಿನ ಕೊಲೆ ರಹಸ್ಯ ಬಯಲಾಗಿದೆ.
ಏನಿದು ಘಟನೆ:ಡಿಸೆಂಬರ್ 24ರಂದು ಚೇಳೂರು ಪಟ್ಟಣದಲ್ಲಿ ಮೆಹಮೂಬಿ ಎಂಬಾಕೆಯ ಮನೆಯಲ್ಲಿ ಈಕೆಯ ಮೊಮ್ಮಗಳ 40 ದಿನದ ಗಂಡು ಮಗು ಸಾವನ್ನಪ್ಪಿತ್ತು. ಅನಾರೋಗ್ಯ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಅಜ್ಜಿ ಮಣ್ಣು ಸಹ ಮಾಡಿಸಿಬಿಟ್ಟಿದ್ದಳು. ಆದರೆ ಅಜ್ಜಿಯ ಮೇಲೆ ಅನುಮಾನಗೊಂಡ ಮೊಮ್ಮಗಳು, ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಮೇರೆಗೆ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿತ್ತು. ಎಫ್ಎಸ್ಎಲ್ ವರದಿಯಲ್ಲಿ ಮಗು ಉಸಿರುಗಟ್ಟಿಸಿ ಕೊಂದಿರುವುದಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಮಗುವಿನ ಅಜ್ಜಿಯೇ ಕೊಲೆ ಮಾಡಿರುವುದು ಬಯಲಾಗಿದ್ದು, ಮೆಹಬೂಬಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.ಅಜ್ಜಿಯ ಮೊಮ್ಮಗಳು ಅನ್ಯಧರ್ಮದ ಯುವಕನೊಂದಿಗೆ ಪ್ರೇಮ ವಿವಾಹವಾಗಿದ್ದು, ಬಾಣಂತನಕ್ಕೆ ಅಂತ ಅಜ್ಜಿಯ ಮನೆಗೆ ಬಂದಿದ್ದಳು. ಅಜ್ಜಿಗೆ ಅನ್ಯಧರ್ಮದ ಯುವಕನೊಂದಿಗೆ ಪ್ರೇಮ ವಿವಾಹವಾಗಿರುವುದು ಇಷ್ಟವಿರಲಿಲ್ಲ. ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ.
ಪ್ರಪಂಚ ನೋಡವ ಮೊದಲೇ ಹಸುಗೂಸನ್ನು ಹತ್ಯೆಗೈಯುವ ಮೂಲಕ ಅಜ್ಜಿ ಪವಿತ್ರ ರಂಜಾನ್ ಮಾಸದಲ್ಲಿ ಜೈಲುಪಾಲಾದರೆ, ಇತ್ತ 9 ತಿಂಗಳ ನವ ಮಾಸ ಹೊತ್ತು ಹೆತ್ತ ತಾಯಿ ತನ್ನ ಮಗನನ್ನ ಕಳೆದುಕೊಂಡು ನೋವು ಅನುಭವಿಸುವಂತಾಗಿದೆ.
ಸಿಕೆಬಿ-4 ಆರೋಪಿ ಅಜ್ಜಿ ಮೆಹಬೂಬಿ