ವಿಜಯಪುರ, ಬಾಗಲಕೋಟೆ, ಕೊಪ್ಪಳದಿಂದ ರಾಜಧಾನಿ ಬೆಂಗಳೂರಿಗೆ ನೇರ ಮಾರ್ಗದ ಸಂಪರ್ಕ ಇಲ್ಲಿಯವರೆಗೂ ಆಗದೇ ಇರುವುದು ಈ ಭಾಗದ ದುರದೃಷ್ಟಕರವೆನಿಸಿದೆ.

ಕುಷ್ಟಗಿ: ಆಲಮಟ್ಟಿ-ಚಿತ್ರದುರ್ಗ ಹೊಸ ರೈಲು ಮಾರ್ಗಕ್ಕೆ ಬಜೆಟ್ ನಲ್ಲಿ ಅನುದಾನ ಘೋಷಿಸುವುದು ಹಾಗೂ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘಟನೆಯ ಪ್ರಮುಖರು ಮಾತನಾಡಿ, ಬಹುನಿರೀಕ್ಷಿತ ಆಲಮಟ್ಟಿ-ಚಿತ್ರದುರ್ಗ ಹೊಸ ರೈಲು ಮಾರ್ಗ ಸರ್ವೇ ಕಾರ್ಯ ಮುಗಿದಿದೆ. ಒಟ್ಟು 264 ಕಿಮೀ ಉದ್ದದ ರೈಲು ಮಾರ್ಗಕ್ಕೆ ₹8431 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ನಂತರದ ಈ ಕಾರ್ಯ ಯೋಜನೆ ಇನ್ನಷ್ಟು ವೇಗಗೊಳಿಸಲು ಮುಂದಿನ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಈ ಹೊಸ ಮಾರ್ಗ ನಿರ್ಮಾಣಕ್ಕೆ ಅನುದಾನ ಘೋಷಿಸಬೇಕು ಅಂದಾಗ ಮಾತ್ರ ಈ ಯೋಜನೆ ಸಾಕಾರಗೊಳ್ಳಲು ಸಾಧ್ಯವಾಗಲಿದೆ ಎಂದರು.

ವಿಜಯಪುರ, ಬಾಗಲಕೋಟೆ, ಕೊಪ್ಪಳದಿಂದ ರಾಜಧಾನಿ ಬೆಂಗಳೂರಿಗೆ ನೇರ ಮಾರ್ಗದ ಸಂಪರ್ಕ ಇಲ್ಲಿಯವರೆಗೂ ಆಗದೇ ಇರುವುದು ಈ ಭಾಗದ ದುರದೃಷ್ಟಕರವೆನಿಸಿದೆ. ಪ್ರಸ್ತುತ ಹುಬ್ಬಳ್ಳಿ ಮಾರ್ಗವಾಗಿ ಇಲ್ಲವೇ ಗುಂತಕಲ್ ಮಾರ್ಗವಾಗಿ ದೂರ ಕ್ರಮಿಸುವ ಸಂಪರ್ಕಿಸುವ ಪರಿಸ್ಥಿತಿ ಈಗಲೂ ಮುಂದುವರೆದಿದೆ. ಆಲಮಟ್ಟಿ-ಚಿತ್ರದುರ್ಗ ಹೊಸ ರೈಲ್ವೆ ಮಾರ್ಗದಿಂದ ವಿಜಯಪುರ, ಬಾಗಲಕೋಟೆ, ಕೊಪ್ಪಳದಿಂದ ಬೆಂಗಳೂರಿಗೆ ಸಂಪರ್ಕಿಸಲು ಸಾಧ್ಯವಾಗಲಿದೆ ಎಂದರು.

ಈ ಹೊಸ ಮಾರ್ಗದಿಂದ ಬೆಂಗಳೂರು-ಸೊಲ್ಲಾಪೂರ ಮಾರ್ಗದಲ್ಲಿ ಅಂತರ ಕಡಿಮೆ ಆಗಲಿದ್ದು, ಇದರಿಂದ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ರೈಲು ಮಾರ್ಗವಾಗಿ ಪರಿಣಮಿಸಲಿದೆ. ಕೂಡಲಸಂಗಮ, ಹುನಗುಂದ, ಇಲಕಲ್, ಕುಷ್ಟಗಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿಯಿಂದ ಚಿತ್ರದುರ್ಗ ಸಂಪರ್ಕಿಸಲಿದೆ. ಈ ಮಾರ್ಗದಿಂದ ಬಾಗಲಕೋಟೆ, ವಿಜಯಪುರ, ಕೊಪ್ಪಳ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಬೇಡಿಕೆಗಳು: ಗದಗ-ವಾಡಿ ರೈಲು ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು. ಗದಗ- ವಾಡಿ ಯೋಜನೆ ಮುಂದುವರಿದ ಕಾಮಗಾರಿ ಕುಷ್ಟಗಿಯಿಂದ ಜುಮ್ಲಾಪೂರ ಕಾಮಗಾರಿ ವಿಳಂಬವಾಗಿದ್ದು ಕಾಮಗಾರಿ ವೇಗಗೊಳಿಸಬೇಕು. ಕುಷ್ಟಗಿಯಿಂದ ಬೆಂಗಳೂರು ರೈಲು ಸಂಚಾರ ಮುಂದಿನ ಜನವರಿ ಹೊಸ ವರ್ಷದಿಂದ ಆರಂಭಿಸಬೇಕು. ದರೋಜಿ-ಬಾಗಲಕೋಟೆ, ಕುಷ್ಟಗಿ-ನರಗುಂದ-ಘಟಪ್ರಭಾ ಹಾಗೂ ಗದಗ-ಕೃಷ್ಣಾಪುರ ಈ ಮಾರ್ಗ ರೈಲು ಯೋಜನೆ ಕೈಗೆತ್ತಿಕೊಳ್ಳಬೇಕು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಇನ್ನೊಂದು ರೈಲು ಸಂಚಾರ ಸೇವೆ ಕಲ್ಪಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಆದಪ್ಪ ಎಸ್.ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಹಾಗಲದಾಳ, ಪರಸಪ್ಪ ಅಳ್ಳಳ್ಳಿ, ಉಪಾಧ್ಯಕ್ಷ ಚನ್ನಪ್ಪ ನಾಲಿಗಾರ, ಬಸವರಾಜ ಸೇರಿದಂತೆ ಅನೇಕರು ಇದ್ದರು.