ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಕಳೆದ 2 ವರ್ಷಗಳಿಂದ ಗುತ್ತಿಗೆದಾರರು ವಿವಿಧ ಕಾಮಗಾರಿ ಕೈಗೊಂಡಿದ್ದಾರೆ. ಅವರಿಗೆ ಬಿಲ್ ಪಾವತಿಸಿದ್ರೆ ಮಾತ್ರ ಮುಂದಿನ ಕೆಲಸಗಳಾಗುತ್ತವೆ. ಇಲ್ಲದಿದ್ರೆ ಯಾವುದೇ ಕೆಲಸವಾಗುವುದಿಲ್ಲ. ಹೀಗಾಗಿ ಸಣ್ಣಪುಟ್ಟ ಕೆಲಸಗಳು ಆಗುತ್ತಿಲ್ಲ ಎಂದು ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಉಮೇಶ ದೇಗಿನಾಳ ಅವರು ಪುರಸಭೆ ಸಾಮಾನ್ಯ ಸಭೆಯ ಗಮನಕ್ಕೆ ತಂದರು.ಇಲ್ಲಿನ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದ ಸದಸ್ಯರಿಗೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಉತ್ತರಿಸಿ, ಈ ಹಿಂದೆ ಕೆಲಸ ಮಾಡಿದ ಗುತ್ತಿಗೆದಾರರ ಪಟ್ಟಿ ತಯಾರಿಸಿ ಎಲ್ಲ ಗುತ್ತಿಗೆದಾರರಿಗೆ ಹಂತ, ಹಂತವಾಗಿ ಬಿಲ್ ನೀಡಲಾಗುತ್ತದೆ. ಯಾವುದೇ ಗುತ್ತಿಗೆದಾರನು ಅಸಮಾಧಾನವಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ವಾರ್ಡಗಳಲ್ಲಿ ಒಳಚರಂಡಿ ಗುಂಡಿಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ. ಪ್ರತಿ ಸಭೆಯಲ್ಲಿ ಜಟ್ಟಿಂಗ್ ಯಂತ್ರ ಖರೀದಿಸುವ ಕುರಿತು ಚರ್ಚೆ ನಡೆಯುತ್ತಲೇ ಇರುತ್ತದೆ. 3 ವರ್ಷದ ಹಿಂದೆಯೇ ₹7 ಲಕ್ಷ ಪುರಸಭೆಯಿಂದ ನೀಡಿ ಜಟ್ಟಿಂಗ್ ಯಂತ್ರ ತರಲಾಗಿದೆ. ಆದರೆ ಯಂತ್ರದ ಪಾಸಿಂಗ್ ಪುಸ್ತಕ, ಆರ್‌ಸಿ ಬುಕ್ ಪುರಸಭೆಯಲ್ಲಿ ಇಲ್ಲ. ಹೀಗಾದರೆ ಹೇಗೆ ಎಂದು ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಅಧ್ಯಕ್ಷ ರಾಠೋಡ ಸಮಾಜಾಯಿಸಿ, ಹಿಂದಿನ ಮುಖ್ಯಾಧಿಕಾರಿಗಳು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿಲ್ಲ. ಇಂದು ಒಳ್ಳೆಯ ಮುಖ್ಯಾಧಿಕಾರಿ ಬಂದಿದ್ದಾರೆ. ಅವರ ಮೂಲಕ ಪಟ್ಟಣದ ಅಭಿವೃದ್ಧಿ ಜೊತೆಗೆ ಸದಸ್ಯರು ತಮ್ಮ ವಾರ್ಡಗಳಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಕಡಿಮೆ ಅನುದಾನದ ಕಾಮಗಾರಿ ಮಾಡಿಸೋಣ ಎಂದರು.
ನನ್ನ ವಾರ್ಡನಲ್ಲಿ ಕಳೆದ 3 ತಿಂಗಳ ಹಿಂದೆ ₹5 ಲಕ್ಷ ಅನುದಾನದಲ್ಲಿ ಸಿ.ಸಿ.ರಸ್ತೆ ಮಾಡಲಾಗಿದೆ. ಪೈಪ್ ಹಾಕುವ ನೆಪದಲ್ಲಿ ಹೊಸ ಸಿ.ಸಿ.ರಸ್ತೆ ಅಗೆದಿದ್ದಾರೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದ ಬಿರಾದಾರ, ಕೂಡಲೇ ಸಿಸಿ ರಸ್ತೆ ದುರಸ್ತಿಗೆ ಆಗ್ರಹಿಸಿದರು.ಸಾರ್ವಜನಿಕ ಸ್ಮಶಾನ, ಹಳ್ಳ, ಉದ್ಯಾನಗಳ ಅತಿಕ್ರಮಣಗೊಂಡಿದ್ದು ಅವುಗಳ ಸರ್ವೇ ಮಾಡಿಸಲು ಕಳೆದ ಸಭೆಯಲ್ಲಿಯೇ ಠರಾವು ಪಾಸ್ ಮಾಡಲಾಗಿದೆ. ಇಲ್ಲಿಯವರೆಗೆ ಇಲಾಖೆಯವರು ಸರ್ವೇ ಮಾಡಲು ಬಂದಿರುವುದಿಲ್ಲ. ಇದು ಅಧಿಕಾರಿಗಳ ತಪ್ಪೂ, ಪುರಸಭೆಯವರ ತಪ್ಪೊ ಹೇಳಬೇಕು ಎಂದು ಸದಸ್ಯ ದೇವೆಂದ್ರ ಕುಂಬಾರ ಏರುಧ್ವನಿಯಲ್ಲಿ ಕೇಳಿದರು.
ಸರ್ಕಾರ 5 ಗ್ಯಾರಂಟಿ ಸೇರಿ ವಿವಿಧ ಯೋಜನೆ ಜನರಿಗೆ ನೀಡುತ್ತಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನ, ಮಸೀದಿ, ಚರ್ಚಗಳಿಗೆ ನೀಡಿರುವ ನಲ್ಲಿ ನೀರಿನ ಬಿಲ್ ಮನ್ನಾ ಮಾಡಬೇಕು ಎಂದು ಕಳೆದ ಸಭೆಯಲ್ಲಿ ಠರಾವಾಗಿದ್ರೂ ಕ್ರಮ ಕೈಗೊಂಡಿರುವುದಿಲ್ಲ. ಬಿಲ್ ಮನ್ನಾ ಮಾಡುವವರೆಗೆ ಸಭೆ ಮುಂದುವರೆಸಬಾರದು ಎಂದು ಪಟ್ಟು ಹಿಡಿದರು. ಇದಕ್ಕೆ ಮುಖ್ಯಾಧಿಕಾರಿಗಳು ಠರಾವು ಪಾಸ್ ಮಾಡಿ ಡಿಸಿಗೆ ಕಳಿಸಿ, ಅವರಿಂದ ಒಪ್ಪಿಗೆ ಪಡೆದುಕೊಂಡು ತಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ವರ್ಕ್ ಆರ್ಡರ್ ನೀಡಿದ ಕಾಲಾವಧಿಯಲ್ಲಿ ಕಾಮಗಾರಿ ಮಾಡದ ಗುತ್ತಿಗೆದಾರರ ಗುತ್ತಿಗೆ ಟೆಂಡರ್ ರದ್ದು ಮಾಡಿ ಪುನಃ ಟೆಂಡರ್ ಕೆರೆಯಬೇಕು ಎಂದು ಸದಸ್ಯ ಇಸ್ಮಾಯಿಲ್ ಅರಬ ಒತ್ತಾಯಿಸಿದರು. ಕೆಲ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಎಂಜನಿಯರ್ ಅಶೋಕ ಚಂದನ್ ತಿಳಿಸಿದರು.
ವಿಶೇಷ ನೇಮಕಾತಿ ಕಾಯಂ ಪೌರಕಾರ್ಮಿಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಸಂಬಳ ಪಾವತಿ ಮಾಡಬೇಕು ಎಂದು ಸರ್ಕಾರ ಸುತ್ತೊಲೆ ಹೊರಡಿಸಿದ್ದು, ಇಂಡಿ ಪುರಸಭೆಯ ವಿಶೇಷ ನೇಮಕಾತಿ ಕಾಯಂ ಪೌರಕಾರ್ಮಿಕರಿಗೆ 8 ತಿಂಗಳಿಂದ ವೇತನ ಮಾಡಿರುವುದಿಲ್ಲ ಎಂದು ಕಾರ್ಮಿಕರು ಸಭೆಯಲ್ಲಿ ಮನವಿ ಸಲ್ಲಿಸಿದರು. ಪುರಸಭೆ ಕಚೇರಿ ವ್ಯವಸ್ಥಾಪಕ ಪ್ರವೀಣ ಸೋನಾರ ಸಭೆಯ ನಡಾವಳಿ ಓದಿದರು.ಪುರಸಭೆ ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಗೀತಾ ಸುದೀರ ಕರಕಟ್ಟಿ, ಸದಸ್ಯರಾದ ಭೀಮನಗೌಡ ಪಾಟೀಲ, ಅಯುಬ ಬಾಗವಾನ, ಮುಸ್ತಾಕ ಇಂಡಿಕರ, ಅಸ್ಲಮ ಕಡಣಿ, ಶಬ್ಬಿರ ಖಾಜಿ, ಸೈಪನ ಪವಾರ, ರೇಖಾ ಮೂರಮನ, ಶೈಲಜಾ ಪೂಜಾರಿ, ಇಂಜನೀಯರ ಅಶೋಕ ಚಂದನನ, ಕಚೇರಿ ವ್ಯವಸ್ಥಾಪಕ ಪ್ರವೀಣ ಸೋನಾರ, ಲೆಕ್ಕಾಧಿಕಾರಿ ಅಸ್ಲಮ ಖಾದೀಮ, ಶಿವು ಸೋಮನಾಯಕ, ಚಂದ್ರಶೇಖರ ಕಾಲೇಬಾಗ, ಹುಚ್ಚಪ್ಪ ಶಿವಶರಣ, ಮುತ್ತು ಮುರಾಳ, ಶಿವು ಬಡಿಗೇರ, ಅಬ್ದುಲ್ ರಷಿದ ಅರಬ, ಸಂಜಯ ರಾಠೋಡ ಇತರರು ಸಭೆಯಲ್ಲಿ ಇದ್ದರು.
ಇದೇ ವೇಳೆ ಪುರಸಭೆಯ ನಾಮನಿರ್ದೇಶನ ಸದಸ್ಯರಿಗೆ ಸನ್ಮಾನಿಸಲಾಯಿತು.