ಸರ್ಕಾರಿ ಜಮೀನು ಸಾಗುವಳಿದಾರರಿಗೆ ಪಟ್ಟಾ ನೀಡಿ: ಯಶ್ವಂತ್‌

| Published : Mar 04 2024, 01:19 AM IST

ಸರ್ಕಾರಿ ಜಮೀನು ಸಾಗುವಳಿದಾರರಿಗೆ ಪಟ್ಟಾ ನೀಡಿ: ಯಶ್ವಂತ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಂಡವಾಳಶಾಹಿ ಕಾರ್ಪೊರೇಟ್ ಕಂಪನಿಗಳ ಪರವಾದ ಕಾನೂನುಗಳನ್ನು ಜಾರಿ ಮಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಿದೆ.

ಸಂಡೂರು: ಅರಣ್ಯ ಹಾಗೂ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ವಿತರಿಸಬೇಕು. ಪಟ್ಟಾ ಪಡೆಯಲು ರೈತರು ಸಂಘಟಿತ ಹೋರಾಟ ನಡೆಸುವುದು ಅಗತ್ಯವಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಟಿ. ಯಶ್ವಂತ್ ತಿಳಿಸಿದರು.

ಪಟ್ಟಣದ ನಿಸರ್ಗ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ೭೫೦೦೦ ಎಕರೆ ಅರಣ್ಯ ಭೂಮಿ ಇದೆ. ಅಲ್ಲಿ ಗಣಿಗಾರಿಕೆ ಮಾಡಿದರೆ ಅರಣ್ಯ ನಾಶವಾಗುವುದಿಲ್ಲ. ರೈತರು ಉಳುಮೆ ಮಾಡಿದರೆ ಅರಣ್ಯ ನಾಶವಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ರೈತರಿಗೆ ಭೂಮಿ ನೀಡಿ ಎನ್ನುವ ನೀತಿ ಹೋಗಿ ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ನೀಡಿ ಎನ್ನುವ ಹೊಸ ನೀತಿಗಳು ಬರುತ್ತಿವೆ. ಕೇಂದ್ರ ಸರ್ಕಾರ ರೈತರನ್ನು ಒಕ್ಕಲೆಬ್ಬಿಸಿ ವಲಸೆ ಕಾರ್ಮಿಕರನ್ನಾಗಿ ಮಾಡುತ್ತಿದೆ. ಬಂಡವಾಳಶಾಹಿ ಕಾರ್ಪೊರೇಟ್ ಕಂಪನಿಗಳ ಪರವಾದ ಕಾನೂನುಗಳನ್ನು ಜಾರಿ ಮಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಿದೆ. ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ಕಿತ್ತುಕೊಳ್ಳಲು ಬಿಡಬಾರದು ಎಂದರು.

ಸಂಘದ ಜಿಲ್ಲಾಧ್ಯಕ್ಷರಾದ ವಿ.ಎಸ್. ಶಿವಶಂಕರ್ ಮಾತನಾಡಿ, ಅರಣ್ಯ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಂದ ಅರಣ್ಯ ಹಕ್ಕು ಸಮಿತಿಗೆ ಒಟ್ಟು ೩೨೦೧ ಅರ್ಜಿಗಳು ಸಲ್ಲಿಕೆಯಾಗಿವೆ. ೯೮೯ ಅರ್ಜಿಗಳು ಗ್ರಾಮ ಮಟ್ಟದ ಸಭೆಯಲ್ಲಿ ಅನುಮೋದನೆಗೊಂಡಿದ್ದು, ಉಳಿದ ೨೨೧೨ ಅರ್ಜಿಗಳನ್ನು ಈ ಕಾಯ್ದೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೊರತೆಯಿಂದಾಗಿ ತಿರಸ್ಕರಿಸಲಾಗಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಸವೋಚ್ಛ ನ್ಯಾಯಾಲಯವು ಅರ್ಜಿಗಳ ಪುನರ್ ಪರಿಶೀಲನೆಗೆ ಆದೇಶ ನೀಡಿದರೂ, ಈವರೆಗೆ ಈ ಕಾರ್ಯ ಪೂರ್ಣಗೊಂಡಿರುವುದಿಲ್ಲ ಹಾಗೂ ಅನುಮೋದನೆಗೊಂಡ ಅರ್ಜಿಗಳಿಗೆ ಒಂದಿಂಚೂ ಭೂಮಿ ಕೊಡದೆ ದೊಡ್ಡ ಕಾರ್ಖಾನೆ ಹಾಗೂ ಕಂಪನಿಗಳಿಗೆ ಹೆಕ್ಟೇರ್‌ಗಟ್ಟಲೆ ಜಮೀನುಗಳನ್ನು ನೀಡುತ್ತಿರುವುದು ಖೇದಕರವಾಗಿದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಸತ್ಯಬಾಬು, ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಮುಖಂಡರಾದ ಎ. ಸ್ವಾಮಿ, ಎಚ್. ದುರ್ಗಮ್ಮ, ಶಂಕರಪ್ಪ, ಸಯ್ಯದ್ ಶರೀಫ್, ಎಸ್. ಕಾಲುಬಾ, ವಿ. ದೇವಣ್ಣ, ಎನ್. ಯಲ್ಲಾಲಿಂಗ, ಶಂಕರಪ್ಪ, ವಿವಿಧ ಗ್ರಾಮಗಳ ರೈತರಾದ ಸಿದ್ದಪ್ಪ, ನಿಂಗಯ್ಯ, ತಿರುಪತಿ ಕಲ್ಲಪ್ಪ, ನಾಗರಾಜ, ಹೊನ್ನೂರ್‌ಸ್ವಾಮಿ, ಹಂಪಮ್ಮ, ಪಂಪನಗೌಡ, ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.