ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನ.18ರಂದು ಜರುಗಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗುವ ಕೃಷಿಮೇಳ ಹಾಗೂ ಜಾನುವಾರ ಜಾತ್ರೆಗೆ ಸರ್ಕಾರದಿಂದ ಅನುದಾನ ಕೊಡುವುದಾಗಿ ಶಾಸಕ ಮಹಾಂತೇಶ ಕೌಜಲಗಿ ಭರವಸೆ ನೀಡಿದರು.ಮಂಗಳವಾರ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಕರೆಯಲಾಗಿದ್ದ ಕೃಷಿ ಮೇಳ ಹಾಗೂ ಜಾನುವಾರ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಬೃಹತ್ ಮಟ್ಟದಲ್ಲಿ ಕೃಷಿ ಮೇಳ ಹಾಗೂ ಜಾನುವಾರು ಜಾತ್ರೆ ನಡೆಸಲು ನಿರ್ಧರಿಸಲಾಗಿದೆ. ಕೃಷಿ ವಿಜ್ಞಾನಿಗಳಿಂದ ವಿಚಾರ ಸಂಕಿರಣ ಮೂಲಕ ರೈತರಿಗೆ ಹೊಸ ತಂತ್ರಜ್ಞಾನದ ಬಳಕೆ ಪರಿಚಯಿಸೋಣ. ರೈತರಿಗೆ ಉಪಯೋಗವಾಗುವ ಯಂತ್ರೋಪಕರಣ, ಸಾವಯವ ಕೃಷಿ ಪದ್ಧತಿ ಸೇರಿದಂತೆ ಹಲವು ಮಾಹಿತಿ ಒದಗಿಸುವ ಹಾಗೂ ಕನಿಷ್ಠ ದರದಲ್ಲಿ ಕೈಗೆಟುಗೊವ ಕೃಷಿ ಉಪಕರಣಗಳನ್ನು ರೈತರಿಗೆ ಒದಗಿಸುವ ಮತ್ತು ವಿವಿಧ ಭಾಗಗಳ ಜಾನುವಾರುಗಳ ಬಗ್ಗೆ ಪರಿಚಯ ಹಾಗೂ ಖರೀದಿಗೆ ಕೃಷಿ ಮೇಳ ಹಾಗೂ ಜಾನುವಾರು ಜಾತ್ರೆ ಪ್ರಮುಖ ವೇದಿಕೆಯಾಗಲಿದೆ ಎಂದರು.ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಕೃಷಿ ಮೇಳಕ್ಕೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಬೇಕು. ಮಾದರಿ ಕೃಷಿ ಮೇಳವನ್ನು ನಡೆಸಿ ರೈತರಿಗೆ ಹೊಸ, ಹೊಸ ತಂತ್ರಜ್ಞಾನದ ಪರಿಚಯಿಸೋಣ.ಕೆವಿಕೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಬೇಕು ಎಂದು ಸಲಹೆ ನೀಡಿದರು.ಸಮಿತಿ ಅಧ್ಯಕ್ಷ, ಶಿವರಂಜನ ಬೋಳನ್ನವರ ರೈತ ಮಕ್ಕಳ ಮದುವೆಗಾಗಿ ವಧು-ವರರ ಅನ್ವೇಷಣ ಕೇಂದ್ರ ನಿರ್ಮಿಸಿ, ರೈತ ಮಕ್ಕಳಿಗೆ ಅನುಕೂಲ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಮಹಾಂತೇಶ ತುರಮರಿ, ತಹಸೀಲ್ದಾರ್ ಹಣಮಂತ ಶಿರಹಟ್ಟಿ ಮಾತನಾಡಿದರು. ಜಿಲ್ಲಾ ಉಪಕೃಷಿ ನಿರ್ದೇಶಕ ಎಸ್.ಬಿ. ಕೊಂಗವಾಡ, ತಾಲೂಕಾ ಅಧಿಕಾರಿ ಬಸವರಾಜ ದಳವಾಯಿ, ಕೆವಿಕೆ ಕೃಷಿ ವಿಜ್ಞಾನಿ ಡಾ.ಮಂಜುನಾ ಕೆಂಚರೆಡ್ಡಿ, ತಾಲೂಕು ಪಶುವೈದ್ಯಾಧಿಕಾರಿ ಶ್ರೀಕಾಂತ ಗಾಂವಿ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಶೀಲಾ ಮುರಗೋಡ, ಎಪಿಎಂಸಿ ಅಧಿಕಾರಿ ಸುನೀಲ ಗೊಡಬೊಲೆ, ಸಿ.ಆರ್. ಪಾಟೀಲ, ಬಸವರಾಜ ಜನ್ಮಟ್ಟಿ, ಎಫ್.ಎಸ್.ಸಿದ್ದನಗೌಡರ, ಮಹೇಶ ಬೆಲ್ಲದ, ಬಿ.ಬಿ.ಗಣಾಚಾರಿ ಮಾತನಾಡಿ, ಸಲಹೆ ಸೂಚನೆ ನೀಡಿದರು. ಮಹಾಂತೇಶ ಮತ್ತಿಕೊಪ್ಪ, ವಿರುಪಾಕ್ಷಯ್ಯ ಕೋರಿಮಠ, ಮಡಿವಾಳಪ್ಪ ಹೋಟಿ, ಬಸವರಾಜ ಭರಮಣ್ಣವರ, ಶಿವಪ್ಪ ಮತ್ತಿಕೊಪ್ಪ, ಶೇಖಪ್ಪ ಜತ್ತಿ, ಉಳವಪ್ಪ ಉಪ್ಪಿನ, ಕೃಷಿ ಮೇಳ ಆಯೋಜನೆ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಇದ್ದರು.