ಸಾರಾಂಶ
ಮಾರುಕಟ್ಟೆಯಲ್ಲಿ ಮಳಿಗೆಗಳಿಂದ ಸೆಸ್/ತರಿಗೆ ಸಂಗ್ರಹಿಸಲು ಅಂಜನಾ ಮೂರ್ತಿ ಎಂಬುವರಿಗೆ ಇ-ಟೆಂಡರ್ ನೀಡಿರುವ ಕ್ರಮ ಪ್ರಶ್ನಿಸಿ ಮತ್ತು ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು : ನಗರದ ಕೆ.ಆರ್.ಪುರ ಸಂತೆ ಮೈದಾನ ಮಾರುಕಟ್ಟೆಯಲ್ಲಿ ಮಳಿಗೆಗಳಿಂದ ಸೆಸ್/ತರಿಗೆ ಸಂಗ್ರಹಿಸಲು ಅಂಜನಾ ಮೂರ್ತಿ ಎಂಬುವರಿಗೆ ಇ-ಟೆಂಡರ್ ನೀಡಿರುವ ಕ್ರಮ ಪ್ರಶ್ನಿಸಿ ಮತ್ತು ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಅಖಿಲ ಕರ್ನಾಟಕ ರೈತ ಮತ್ತು ವ್ಯಾಪಾರಿಗಳ ಒಕ್ಕೂಟ ಹಾಗೂ ಇತರೆ ಸ್ಥಳೀಯ ವ್ಯಾಪಾರಿಗಳು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ ಈ ಆದೇಶ ಮಾಡಿದೆ.
ಸಂತೆ ಮೈದಾನ ಮಾರುಕಟ್ಟೆಯ ಮಳಿಗೆಗಳಿಂದ ಒಂದು ವರ್ಷದ ಅವಧಿಗೆ ದಿನವಹಿ ಹಾಗೂ ವಾರದ ಸೆಸ್/ತೆರಿಗೆ ಸಂಗ್ರಹಿಸಲು ಟೆಂಡರ್ ಆಹ್ವಾನಿಸಿ ಬಿಬಿಎಂಪಿ 2024ರ ಸೆ.18ರಂದು ಇ-ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿ ಅಂಜನಾಮೂರ್ತಿ ಎಂಬುವವರನ್ನು ಯಶಸ್ವಿ ಬಿಡ್‌ದಾರರೆಂದು ಪರಿಗಣಿಸಿತು. ಅಂಜನಾಮೂರ್ತಿ ಸಂಗ್ರಹಿಸಲು ಅರ್ಹವಾಗಿರುವ ಸಂತೆ ಮೈದಾನ ಮಾರುಕಟ್ಟೆಯ ಇರುವ 1 ಎಕರೆ 14 ಗುಂಟೆ ವಿಸ್ತೀರ್ಣದ ಜಾಗದ ಗಡಿರೇಖೆಯನ್ನು ಬಿಬಿಎಂಪಿ ಅಧಿಕಾರಿಗಳು ನಿಗದಿಪಡಿಸಿಲ್ಲ. ಸೆಸ್ ಸಂಗ್ರಹಿಸಲು ಗುತ್ತಿಗೆ ಪಡೆದಿರುವ ಯಶಸ್ವಿ ಬಿಡ್ದುದಾರರೇ ತಮ್ಮ ಮಳಿಗೆಯ ಬಾಡಿಗೆಯ ಬಾಕಿ ಪಾವತಿಸುವಲ್ಲಿ ವಿಫಲರಾಗಿ, ಸುಸ್ಥಿದಾರರಾಗಿದ್ದಾರೆ. ನಿಯಮದ ಪ್ರಕಾರ ಅಂತವರಿಗೆ ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಅವಕಾಶವೇ ಇಲ್ಲ. ಆದ್ದರಿಂದ ಅವರಿಗೆ ಸೆಸ್/ತೆರಿಗೆ ಸಂಗ್ರಹಿಸಲು ಅನುಮತಿಸಿರುವುದೇ ಅಕ್ರಮ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಅಲ್ಲದೆ, ಸಂತೆ ಮೈದಾನ ಮಾರುಕಟ್ಟೆಯಲ್ಲಿ ರೈತರಿಗೆ ಮೂಲಭೂತ ಸೌಕರ್ಯಗಳೇ ಕಲ್ಪಿಸಿಲ್ಲ. ಹಾಗಾಗಿ, ರೈತರಿಗೆ ಅಗತ್ಯ ಮೂಲಸೌರ್ಯ ಕಲ್ಪಿಸಬೇಕು. ಸೆಸ್ ಸಂಗ್ರಹಿಸಲು ಹೊರಡಿಸಿರುವ ಇ-ಹರಾಜು ನೋಟಿಸ್ ರದ್ದುಪಡಿಸಬೇಕು. ಸೂಕ್ತ ರೀತಿಯಲ್ಲಿ ಸೆಸ್ ಸಂಗ್ರಹಿಸಲು ಅನುಕೂಲವಾಗುವಂತೆ ಸಂತೆ ಮೈದಾನ ಗಡಿರೇಖೆ ಗುರುತಿಸುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.