ಪ್ರಭಾವಿ ಮಠಗಳಿಗೆ ಅನುದಾನ, ನಾವು ಲೆಕ್ಕಕ್ಕಿಲ್ಲ

| Published : Aug 14 2024, 12:53 AM IST

ಸಾರಾಂಶ

ಪ್ರಭಾವಿ ಮಠಗಳಿಗಷ್ಟೇ ಸರ್ಕಾರದಿಂದ ಅನುದಾನ ಹೋಗುತ್ತಿದ್ದು, ನಮ್ಮಂತಹ ಅತಿ ಹಿಂದುಳಿದವರನ್ನು ಯಾರೂ ಗಮನಿಸುತ್ತಿಲ್ಲವೆಂದು ಮಠಾಧೀಶರ ಮಹಾ ಸಭಾ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅಸಮಧಾನ ಹೊರಹಾಕಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಪ್ರಭಾವಿ ಮಠಗಳಿಗಷ್ಟೇ ಸರ್ಕಾರದಿಂದ ಅನುದಾನ ಹೋಗುತ್ತಿದ್ದು, ನಮ್ಮಂತಹ ಅತಿ ಹಿಂದುಳಿದವರನ್ನು ಯಾರೂ ಗಮನಿಸುತ್ತಿಲ್ಲವೆಂದು ಮಠಾಧೀಶರ ಮಹಾ ಸಭಾ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅಸಮಧಾನ ಹೊರಹಾಕಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಮಠಗಳಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆಯುವುದಕ್ಕಾಗಿ ಆ.18 ರಂದು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಸಭೆ ಕರೆಯಲಾಗಿದೆ ಎಂದರು.ಸಿದ್ದರಾಮಯ್ಯನವರು 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕೆಲವು ಪ್ರಭಾವಿ ಮಠಗಳಿಗೆ ಅನುದಾನ ಸಿಗುತ್ತಿದೆಯೇ ವಿನಃ ಹಿಂದುಳಿದ ಮಠಗಳನ್ನು ಕಡೆಗಣಿಸಲಾಗುತ್ತಿದೆ. ಲಂಬಾಣಿ ಸಮಾಜದ ಮಾಜಿ ಸಚಿವ ಕೆ. ಶಿವಮೂರ್ತಿನಾಯ್ಕರನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡಲಾಗಿದೆ.

ಈಡಿಗ ಸಮಾಜದ ಬಿ.ಕೆ. ಹರಿಪ್ರಸಾದ್‍ಗೂ ಯಾವ ಅಧಿಕಾರ ಸಿಕ್ಕಿಲ್ಲ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರವಾಗಿದ್ದೇನೆಂದು ಹೇಳಿಕೊಲ. ಆದರೆ ಹಿಂದುಳಿದ ಮಠಗಳ ಕಡೆ ಗಮನ ಕೊಡುತ್ತಿಲ್ಲದಿರುವುದು ವಿಪರ್ಯಾಸ. ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ದುರ್ಬಳಕೆಯಾಗಿದೆ. ಹಿಂದುಳಿದ ನಾಯಕರುಗಳನ್ನು ಮುಗಿಸುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ಮುಂದಿನ ನಮ್ಮ ಹೋರಾಟಗಳನ್ನು ರೂಪಿಸುವುದಕ್ಕಾಗಿ ಕರೆದಿರುವ ಸಭೆಯಲ್ಲಿ 500 ಆಯ್ದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮಿಗಳ ಹಿಂದು ಧರ್ಮ ಧರ್ಮವೇ ಅಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಆ ರೀತಿ ಮಾತನಾಡಿರುವುದು ಸರಿಯಲ್ಲ. ಕೂಡಲೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಸಮಾಜದ ಕಟ್ಟಕಡೆಯಲ್ಲಿರುವವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬೇರೆ ಬೇರೆ ಉದ್ದೇಶಗಳಿಗೆ ಬಳಸಿ ಈ ಜನಾಂಗವನ್ನು ಶೋಷಣೆಗೊಳಪಡಿಸುತ್ತಿದೆ. ದಲಿತರಿಗಿರುವ ದೊಡ್ಡ ಶಕ್ತಿಯನ್ನು ಕುಗ್ಗಿಸುವ ಕೆಲಸವಾಗುತ್ತಿರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ, ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ತೆಗೆದುಕೊಂಡಿರುವ ಮಠಗಳೇ ಮತ್ತೆ ಮತ್ತೆ ಸರ್ಕಾರದಿಂದ ಅನುದಾನ ಕಬಳಿಸುತ್ತಿವೆ. ಹಿಂದುಳಿದ ಮಠಗಳ ಕಡೆ ಯಾವ ಸರ್ಕಾರಗಳು ತಿರುಗಿ ನೋಡದಂತಾಗಿವೆ. ಹದಿನೈದರಿಂದ ಹದಿನೆಂಟು ಸಮುದಾಯದ ಸ್ವಾಮೀಜಿಗಳು ಸೇರಿಕೊಂಡು ಸಂವಿಧಾನವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಡಾ. ಬಿ. ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತೇವೆಂದರು.ಕುಂಬಾರ ಸಮಾಜದ ಕುಂಬಾರ ಗುಂಡಯ್ಯ ಸ್ವಾಮೀಜಿ, ಆರ್ಯ ಈಡಿಗರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಪ್ರತಾಪ್, ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.