ಸಾರಾಂಶ
ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಕಾಂಗ್ರೆಸ್ ಸರ್ಕಾರ ಜನಪರವಾಗಿದೆ. ಅದೇ ರೀತಿ ನಾನು ಸಹಾ ಈ ಭಾಗದ ಶಾಸಕನಾಗಿ ಹಲವು ಕಾರ್ಯಕ್ರಮಗಳಿಗೆ ಅನುದಾನ ನೀಡುವ ಮೂಲಕ ನುಡಿದಂತೆ ನಡೆದಿದ್ದೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.ಕೊಳ್ಳೇಗಾಲ ತಾಲೂಕಿನ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ದೇಗುಲದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕೆಲಸ, ಇಂದು ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಅರ್ಥಪೂರ್ಣವಾದುದು ಎಂದರು. ಇಂದು ತಗರಪುರ ಗ್ರಾಮದಲ್ಲಿ ಶನೇಶ್ವರ ಸ್ವಾಮಿ ದೇಗುಲದಲ್ಲಿ ನೆಲಹಾಸು ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ಎಂಜಿನಿಯರ್ ಸೂಕ್ತವಾಗಿ ನಿರ್ವಹಿಸಿದ್ದಾರೆ. ಅವರಿಗೆ ದೈವಕೃಪೆಯಿಂದಾಗಿಯೇ ಕಾಮಗಾರಿ 2 ದಿನದಲ್ಲಿ ಪೂರ್ಣಗೊಳಿಸಿದ್ದಾರೆ. ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಹೊಂಗನೂರು ಚಂದ್ರು ಅವರು ದೈವಭಕ್ತರು. ಅವರ ಮನವಿ ಮೇರೆಗೆ ಈ ಭಾಗದಲ್ಲಿ ಧಾರ್ಮಿಕ ಕಾರ್ಯಕ್ಕೂ ಹೆಚ್ಚು ಒತ್ತು ನೀಡಿರುವೆ, ಆಲಹಳ್ಳಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಹಿಂದಿನ ಶಾಸಕರು ಅನುದಾನ ನೀಡಿ ವಾಪಸ್ಸು ಪಡೆದಿದ್ದರು, ಗ್ರಾಮಸ್ಥರ ಕೋರಿಕೆ ಮೇರೆಗೆ ಪುನಃ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲಾಗಿದ್ದು ಈ ಘಟಕ ಗ್ರಾಮಸ್ಥರೆಲ್ಲರಿಗೂ ಸದ್ಬಳಕೆಯಾಗಬೇಕು ಎಂಬ ಕಲ್ಪನೆ ನನ್ನದು ಎಂದರು.ಸಿಲ್ಕಲ್ ಪುರದಲ್ಲಿ ಮಲ್ಲಣ್ಣ ಜೊತೆಗೆ ಗ್ರಾಮಸ್ಥರು ನನ್ನ ಭೇಟಿ ಮಾಡಿ ದೇಗುಲಕ್ಕೆ ಅನುದಾನ ಕೋರಿದ್ದರು, ಅದರಂತೆ ₹5ಲಕ್ಷ ಅನುದಾನ ನೀಡಿದ್ದು ದೇಗುಲವನ್ನು ಉತ್ತಮ ರೀತಿ ನಿರ್ಮಿಸಲಾಗಿದೆ. ಚಿಲಕವಾಡಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಮುಖ್ಯರಸ್ತೆಯಲ್ಲಿ ಭಕ್ತಾಧಿಗಳು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುದ್ಧ ನೀರಿನ ಘಟಕ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. ಮುಖ್ಯಮಂತ್ರಿಗಳಿಂದ ₹25ಕೋಟಿ ಅನುದಾನ: ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ₹25ಕೋಟಿ ಅನುದಾನ ಮಂಜೂರು ಮಾಡಿದ್ದರು. ಅನೇಕ ಗ್ರಾಮಗಳಲ್ಲಿ ಎಲ್ಲ ಧರ್ಮ, ವರ್ಗದ ಭವನ ನಿರ್ಮಾಣಕ್ಕೆ ಹಣ ನೀಡಿರುವೆ. ಕೊಳ್ಳೇಗಾಲದ ಅಂಬೇಡ್ಕರ್ ಭವನಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ₹3 ಕೋಟಿ ವಿಶೇಷ ಅನುದಾನ ಕೊಟ್ಟಿದ್ದಾರೆ, ಕನಕ ಭವನಕ್ಕೆ ₹50ಲಕ್ಷ, ನಾಯಕರ ಭವನಕ್ಕೆ ಯಳಂದೂರಿನಲ್ಲಿ ₹1ಕೋಟಿ, ಉಪ್ಪಾರ ಭವನಕ್ಕೆ ಯಳಂದೂರಿನಲ್ಲಿ ₹50ಲಕ್ಷ ನೀಡಲಾಗಿದೆ. ಹೊನ್ನೂರಿನಲ್ಲಿ ಬುದ್ದ ವಿಹಾರಕ್ಕೆ ಗ್ರಾಮದ ಹೊರಗಿದ್ದು ಅಲ್ಲಿಗೂ ₹25ಲಕ್ಷ ನೀಡಲು ಪ್ರಸ್ತಾವನೆ ಸಲ್ಲಿಸಿದ್ದೇನೆ, ಸವಿತಾ ಸಮಾಜ, ಮಡಿವಾಳ ಸಮಾಜದ ಅಭ್ಯುದಯಕ್ಕೂ ಕ್ರಮವಹಿಸಿರುವೆ. ಸಂತೇಮರಳ್ಳಿಯ ಬಸವ ಭವನಕ್ಕೆ ₹50, ಉಮ್ಮತ್ತೂರಿಗೆ ₹25ಲಕ್ಷ, ಮಹಾಮನೆಗೆಗೂ ₹ 25ಲಕ್ಷ ಅನುದಾನ ನೀಡಿರುವೆ ಎಂದರು.ಈ ಸಂದರ್ಭದಲ್ಲಿ ಹೊಂಗನೂರು ಚಂದ್ರು, ತಾಲೂಕು ಗ್ಯಾರಂಟಿ ಯೋಜನೆಯ ತಾಲೂಕು ಅದ್ಯಕ್ಷ ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಲಹಳ್ಳಿ ತೋಟೇಶ್, ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ಸದಸ್ಯ ರಮೇಶ್, ಚೇತನ್ ದೊರೆರಾಜು, ಮಹಾಲಿಂಗ, ರಾಜೇಂದ್ರ, ಗೊಬ್ಬಳಿಪುರ ರಾಚಪ್ಪ, ಸಂತೇಮರಳ್ಳಿ ಮಹೇಶ್, ಮಲ್ಲಣ್ಣ, ಪಿಡಿಒ ಮಲ್ಲೇಶ ಇನ್ನಿತರರಿದ್ದರು.
;Resize=(128,128))
;Resize=(128,128))