ಚಿತ್ರದುರ್ಗದ ಪತ್ರಿಕಾಭವನದಲ್ಲಿ ನಡೆದ ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಸಭೆಯಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಎಸ್ಸಿ, ಎಸ್ಟಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಆರೋಪಿಸಿದರು.ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಪದಗ್ರಹಣ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೋರಾಟದಿಂದ ಮಾತ್ರ ವ್ಯಕ್ತಿತ್ವ ರೂಪುಗೊಂಡು ಸದೃಢರಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಎಸ್ಸಿ. ಮೋರ್ಚಾ ಪದಾಧಿಕಾರಿಗಳ ಮೇಲಿದೆ ಎಂದರು.
2022 ರಲ್ಲಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿಯನ್ನು ಹೆಚ್ಚಿಸಿದರು. 2026 ರಲ್ಲಿ ಕಾಂಗ್ರೆಸ್ ಎಸ್ಸಿ,ಎಸ್ಟಿ ಗಳಿಗೆ ಘೋರ ಅನ್ಯಾಯವೆಸಗಿದೆ. ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹೆಚ್ಚಳ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು. ಲಂಬಾಣಿ, ಭೋವಿ ಜನಾಂಗದವರನ್ನು ಪರಿಶಿಷ್ಟರ ಪಟ್ಟಿಯಿಂದ ತೆಗೆಯುತ್ತಾರೆಂದು ಕಾಂಗ್ರೆಸ್ ನಮ್ಮ ಪಕ್ಷದ ಮೇಲೆ ಅಪ ಪ್ರಚಾರ ನಡೆಸಿತು. ಇದರ ವಿರುದ್ದ ನೀವುಗಳು ಜಾಗೃತರಾಗಿರಬೇಕೆಂದು ಸಂಸದರು ಎಸ್ಸಿ ಮೋರ್ಚಾ ಪದಾಧಿಕಾರಿಗಳಿಗೆ ಕರೆ ನೀಡಿದರು.ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಸುಳ್ಳು ಪ್ರಚಾರ ನಡೆಸಿ ಪರಿಶಿಷ್ಟ ಜನಾಂಗದವರಿಗೆ ತಪ್ಪು ತಿಳುವಳಿಕೆ ಮೂಡಿಸಿತು. ಪದಾಧಿಕಾರಿಗಳು ಜಿಲ್ಲೆಯಾದ್ಯಂತ ಸಂಚರಿಸಿ ಕಾಂಗ್ರೆಸ್ ವೈಫಲ್ಯಗಳನ್ನು ಜನತೆಗೆ ತಿಳಿಸಬೇಕು. ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಲ್ಲ. ಅಸ್ಪೃಶ್ಯತೆ, ಅಸಮಾನತೆ ಎಲ್ಲಿಯವರೆಗೂ ಜೀವಂತವಾಗಿರುತ್ತದೋ ಅಲ್ಲಿಯತನಕ ಮೀಸಲಾತಿ ಇರುತ್ತದೆಂದು ಪ್ರಧಾನಿ ನರೇಂದ್ರಮೋದಿರವರು ಸ್ಪಷ್ಟ ಪಡಿಸಿದ್ದಾರೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ದಲಿತರ ಉದ್ದಾರಕ್ಕಾಗಿ ವಿಶೇಷ ಅಧಿವೇಶನ ಕರೆದು ಸಂವಿಧಾನಕ್ಕೆ ತಿದ್ದುಪಡಿ ತಂದವರು ಯಾರಾದರು ಇದ್ದರೆ ಅದು ಅಟಲ್ ಬಿಹಾರಿ ವಾಜಪೇಯಿರವರು ಮಾತ್ರ. 1950 ರಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿ ಕಲ್ಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಬದುಕು ಸುಧಾರಣೆಯಾಗ ಬೇಕೆಂಬ ಕನಸು ಕಂಡಿದ್ದರು. ಅದು ಈಡೇರದಿದ್ದಾಗ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದರು. ಆಗ ಡಾ.ಬಾಬುಜಗಜೀವನರಾಂ ನೆಹರು ಸರ್ಕಾರದಲ್ಲಿದ್ದರೆಂದು ಹೇಳಿದರು.ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಕಾಂಗ್ರೆಸ್ ಅಪ ಪ್ರಚಾರದಲ್ಲಿ ತೊಡಗಿದ್ದರಿಂದ 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತೊಂದರೆಯಾಯಿತು. ಬಡವರಿಗೆ ಸಹಾಯ ಮಾಡುವ ವ್ಯವಸ್ಥೆಗೆ ಬದಲಾಗಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಠ ವರ್ಗಗಳ ಅಭಿವೃದ್ದಿಗೆ ಬಳಸಬೇಕಾಗಿರುವ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಉಪಯೋಗಿಸಿಕೊಳ್ಳುತ್ತಿದೆ. ಡಾ.ಬಾಬು ಜಗಜೀವನರಾಂರವರು ದೇಶದ ಪ್ರಧಾನಿಯಾಗುವ ಅವಕಾಶ ತಪ್ಪಿತೆಂದು ನೋವಿನಿಂದ ಹೇಳಿಕೊಂಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ಸು ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದೆಂದು ಮಹಾತ್ಮಗಾಂಧಿಯೇ ಸೂಚಿಸಿದ್ದರು. ಜಿಲ್ಲೆಯಲ್ಲಿ ಬಿಜೆಪಿಗೆ ಮತ ನೀಡುವವರು ಬಹಳಷ್ಟಿದ್ದಾರೆ. ನಾಯಕರುಗಳ ಕೊರತೆಯಿದೆ. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಸ್ಪರ್ಧಿಸಲು ನೀವುಗಳು ತಯಾರಾಗಿ ಎಂದು ಎಸ್ಸಿ ಮೋರ್ಚಾ ಪದಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಪ್ರಾಸ್ತಾವಿಕ ಮಾತನಾಡಿ ದೇಶಭಕ್ತಿ, ಸಂಘಟನೆ, ಸಾಮಾಜಿಕ ಭದ್ರತೆ ಹಿನ್ನೆಲೆಯಲ್ಲಿ ಎಸ್ಸಿ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಮುಖ್ಯ. ಮೂರು ವರ್ಷಗಳಿಂದಲೂ ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಅನ್ಯಾಯ ಮಾಡುತ್ತಿದೆ. ನ್ಯಾಯ ಕೊಡಿಸುವ ನಾಯಕತ್ವವನ್ನು ನೀವುಗಳು ಬೆಳೆಸಿಕೊಳ್ಳಿ ಎಂದು ಹೇಳಿದರು.ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಪರಶುರಾಂರವರಿಗೆ ಹೀಮದಿನ ಅಧ್ಯಕ್ಷ ತಿಪ್ಪೇಸ್ವಾಮಿ ಪಕ್ಷದ ಭಾವುಟ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಉಪಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುರೇಶ್, ಮಾಜಿ ಅಧ್ಯಕ್ಷ ಎ.ಮುರಳಿ ,ಭಾರ್ಗವಿ ದ್ರಾವಿಡ್, ಹನುಮಂತೆಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎ.ಎಚ್ .ಶಿವಯೋಗಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ನಾಗರಾಜ್, ಮಲ್ಲೇಶ್, ಬಾಳೆಕಾಯಿ ರಾಂದಾಸ್, ಮಂಜುಳಮ್ಮ, ರಾಜಶೇಖರ್ ವೇದಿಕೆಯಲ್ಲಿದ್ದರು. ಎಸ್ಸಿ ಮೋರ್ಚಾ ನಿಕಟ ಪೂರ್ವ ಅಧ್ಯಕ್ಷ ತಿಪ್ಪೇಸ್ವಾಮಿ ಸ್ವಾಗತಿಸಿದರು.ಕೃಷ್ಣ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.