ಶಿಗ್ಗಾಂವಿ: ತಾಲೂಕಿನ ಗಂಗೆನೂರ ಗ್ರಾಮದಲ್ಲಿ ಸ್ಮಶಾನ ಜಾಗ ಅತಿಕ್ರಮಣ ಮಾಡಿಕೊಂಡು ಸಾಗುವಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರು ಬುಧವಾರ ಶವ ಇಟ್ಟು ದಿಢೀರ್ ಪ್ರತಿಭಟನೆ ನಡೆಸಿದರು.
ತಾಲೂಕಿನ ಗಂಗೆನೂರು ಗ್ರಾಮದ ಶೇಖಪ್ಪ ಇಂಗಳಗಿ ಅವರ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನ ಇಲ್ಲದ ಹಿನ್ನೆಲೆಯಲ್ಲಿ ಜನರು ರೊಚ್ಚಿಗೆದ್ದು ತಹಸೀಲ್ದಾರ್ ಕಾರ್ಯಾಲಯಕ್ಕೆ ಶವ ತೆಗೆದುಕೊಂಡು ಬಂದು ಪ್ರತಿಭಟನೆ ನಡೆಸಿದರು.ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಸ್ಮಶಾನದ ಜಾಗವನ್ನು ಹದ್ದುಬಸ್ತ್ ಮಾಡಿ ತಂತಿ ಬೆಲಿ ಹಾಕಿ ಬಂದೋಬಸ್ತ್ ಮಾಡಿಕೊಡುವಲ್ಲಿ ಅಧಿಕಾರಿಗಳು ನಿಷ್ಕಾಳಜಿ ಮಾಡಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಸ್ಮಶಾನಕ್ಕೆ ನೀಡಿದ ಜಾಗವನ್ನು ಅದೇ ಊರಿನ ನಿಂಗಪ್ಪ ಬಂಕಾಪುರ ಎಂಬುವವರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಪ್ರತಿಬಾರಿ ಯಾರಾದರೂ ತೀರಿಕೊಂಡಾಗ ಶವ ಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪುರಸಭೆಯ ಮಾಜಿ ಅಧ್ಯಕ್ಷ ಪರಶುರಾಮ ಸೊನ್ನದ, ತಿರಕಪ್ಪ ಅಂದಲಗಿ, ನಾಗರಾಜ ಬಾರಕೇರ, ರಾಘು ಕರ್ಜಗಿ, ಅರ್ಜಪ್ಪ ಬಾರಕೇರ, ಮಾಂತೇಶ ಸುಣಗಾರ ಸೇರಿದಂತೆ ಹಲವರು ಇದ್ದರು.