ಸಾರಾಂಶ
ಯೂನುಸ್ ಮೂಲಿಮನಿ
ಕನ್ನಡಪ್ರಭ ವಾರ್ತೆ ನಾಲತವಾಡಸ್ಮಶಾನ ಜಾಗ ಅತಿಕ್ರಮಣವಾದರೂ ಕಂದಾಯ ಇಲಾಖೆಯಾಗಲಿ, ಪಟ್ಟಣ ಪಂಚಾಯತಿ ಅಧಿಕಾರಿಗಳಾಗಲಿ ಯಾವುದೇ ಕ್ರಮ ವಹಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಸುಮಾರು 6.21 ಎಕರೆ ಪ್ರದೇಶದ ಸ್ಮಶಾನ ಜಾಗದಲ್ಲಿ ಕೆಲವು ಸರ್ಕಾರಿ ಕಟ್ಟಡ ಇದ್ದರೇ, ಇನ್ನೂ ಕೆಲವು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದು ಸಂಪೂರ್ಣ ಅತಿಕ್ರಮಣವಾಗಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.
ದಿನದಿಂದ ಬೆಳೆಯುತ್ತಿರುವ ಪಟ್ಟಣದಲ್ಲಿ ಸುಮಾರು 18 ಸಾವಿರಕ್ಕೂ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಸದ್ಯ ಮೇಲ್ವರ್ಗದವರಿಗೆ ಮಾತ್ರ ಸ್ಮಶಾನ ಜಾಗವಿದ್ದರೇ, ಇನ್ನುಳಿದ ಸಮುದಾಯದವರಿಗೆ ಸ್ಮಶಾನ ಭೂಮಿಯೇ ಇಲ್ಲ. ಇತ್ತೀಚಿಗೆ ದಲಿತರೊಬ್ಬರ ಶವ ಸಂಸ್ಕಾರ ಮಾಡಲು ಜಾಗವಿಲ್ಲದ ಕಾರಣ ತಮ್ಮ ಮನೆಯ ಮುಂದೆ ಶವ ಸಂಸ್ಕಾರ ಮಾಡಿರುವುದು ಸ್ಮಶಾನ ಭೂಮಿಯ ಬೇಡಿಕೆ ಈಡೇರಿಕೆಗಾಗಿ ಆಗ್ರಹ ಹೆಚ್ಚಾಯಿತು. ಆಗ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಸ್ಮಶಾನ ಜಾಗ ಅತಿಕ್ರಮಣ ಕುರಿತು ಗೊತ್ತಾಗಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.ಮನವಿಗಿಲ್ಲ ಕವಡೆ ಕಾಸಿನ ಕಿಮ್ಮತ್ತು:
ಅತಿಕ್ರಮಣ ಮಾಡಿರುವ ಸ್ಮಶಾನ ಜಾಗದಲ್ಲಿ ತೆರವು ಕಾರ್ಯಾಚರಣೆ ಮಾಡಬೇಕೆಂಬ ವಿವಿಧ ಸಂಘಟನೆಗಳು, ಮುಖಂಡರು ಮನವಿ ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ಸ್ಮಶಾನ ಜಾಗ ಅತಿಕ್ರಮಣ ಮಾಡಿಕೊಂಡಿದ್ದಾರೆಂದು ತಿಳಿದರೂ ಕ್ರಮ ವಹಿಸಲು ಮುಂದಾಗುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಸ್ಮಶಾನ ಜಾಗ ಅತಿಕ್ರಮಣ ಮಾಡಿಕೊಳ್ಳಲು ಯಾವುದೇ ಕಾನೂನು ಇಲ್ಲ. ಕಂದಾಯ ಇಲಾಖೆಯ ನಿಯಮದ ಪ್ರಕಾರ ಇದು ಅಪರಾಧ. ಇಂತಹ ಅಪರಾಧ ಮಾಡಿದವರ ವಿರುದ್ಧ ಕ್ರಮ ವಹಿಸುವಂತೆ ಸಂಘಟಕರು ಮನವಿ ಪತ್ರ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಒಂದು ಬೃಹತ್ ಹೋರಾಟದ ಎಚ್ಚರಿಕೆ ನೀಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.--------------ಬಾಕ್ಸ್...
ಒಂದು ಎಕರೆ ಬಿಟ್ಟು ಎಲ್ಲವೂ ಅತಿಕ್ರಮಣ!ಪಟ್ಟಣದ ಆಲೂರ ರಸ್ತೆಯಲ್ಲಿನ ಸರ್ವೇ ನಂ.615 ಸರ್ಕಾರಿ ಮಸಣವಾಟ ಜಮೀನು ಒಟ್ಟು 6.21 ಗುಂಟೆ ಇದೆ ಜಾಗ ಸಂಪೂರ್ಣ ಅತಿಕ್ರಮಣವಾಗಿದೆ. ಒಂದು ಎಕರೆ ಪ್ರದೇಶದಷ್ಟು ಜಾಗ ಖಾಲಿ ಬಿಟ್ಟರೆ ಬಹುತೇಖ ಎಲ್ಲ ಭಾಗವನ್ನು ಪೂರ್ತಿಯಾಗಿ ಕಬ್ಜಾ ಮಾಡಿದ್ದಾರೆ. ಈ ಜಾಗದಲ್ಲಿ ಪೊಲೀಸ್ ಠಾಣೆ, ಬಿಸಿಎಂ ಹಾಸ್ಟೇಲ್, ಸಮುದಾಯ ಭವನ ಸೇರಿದಂತೆ ಇನ್ನೂ ಅನೇಕ ಜಾಗವನ್ನು ಕಬಳಿಸಿದ್ದಾರೆ. ಹಲವಾರು ವರ್ಷಗಳಿಂದ ನೆಲೆ ಊರಿದ್ದು, ಈ ಹಿಂದೆ ಇದ್ದ ಗ್ರಾಮ ಪಂಚಾಯತಿಯಲ್ಲಿ ಸ್ಮಶಾನದ ಸರ್ಕಾರಿ ಜಾಗವನ್ನು ತಮ್ಮ ಹೆಸರಿಗೆ ದಾಖಲು ಸಹ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
---------------ಕೋಟ್...
615 ಸರ್ವೇ ನಂಬರ್ ಒಟ್ಟು 6.21 ಎಕರೆ ಪ್ರದೇಶ ಸ್ಮಶಾನ ಜಾಗವನ್ನು ಕೆಲವು ಪ್ರಭಾವಿಗಳು ಹಾಗೂ ಸಂಘ-ಸಂಸ್ಥೆಯವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅತಿಕ್ರಮಣ ಸರ್ವೇ ಮಾಡಿ 2 ವರ್ಷ ಗತಿಸಿದೆ. ತೆರವು ಕಾರ್ಯಾಚರಣೆ ಮಾಡಬೇಕೆಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ, ತಹಸೀಲ್ದಾರ್, ಜಿಲ್ಲಾಧಿಕಾರಿ ಸಮೇತ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗುತ್ತಿಲ್ಲ. ಸ್ಮಶಾನ ಜಾಗದಲ್ಲಿ ಸಮುದಾಯ ಭವನ ಕಟ್ಟಿಸಿ ಅದನ್ನು ಕೃಷಿ ಕಚೇರಿಗೆ ನೀಡಿ ಅದರಿಂದ ಬಾಡಿಗೆ ಪಡೆಯುತಿದ್ದಾರೆ. ಹಲವರು ಇದೇ ರೀತಿ ಮಾಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಬೃಹತ ಪ್ರಮಾಣದಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ.-ಶಿವಾನಂದ ವಾಲಿ, ಯುವ ಜನ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ.
---------ದಲಿತ ಸಮುದಾಯಕ್ಕೆ ಸ್ಮಶಾನ ಜಾಗವಿಲ್ಲದೆ ಮನೆ ಅಂಗಳದಲ್ಲಿ, ಮತ್ತೊಬ್ಬರ ಜಮೀನಿನ ಬದುವಿನಲ್ಲಿ ಶವ ಸಂಸ್ಕಾರ ಮಾಡುತ್ತ ಬರುತಿದ್ದೇವೆ. ನಮ್ಮ ಸಮುದಾಯಕ್ಕೆ ಸ್ಮಶಾನ ಇಲ್ಲ. ಕೆಲವು ದಿನಗಳ ಹಿಂದೆ ಮನೆಯ ಅಂಗಳದಲ್ಲಿ ಶವ ಸಂಸ್ಕಾರ ಮಾಡಿರುವ ಘಟನೆ ಕೂಡ ನಡೆದಿದೆ. ಆವಾಗ ತಹಸೀಲ್ದಾರ್ ಸಾಹೇಬರು ಬಂದು ಸರ್ವೇ ನಂ.615 ರಲ್ಲಿ ಬಿಸಿಎಂ ಹಾಸ್ಟೇಲ್ ಪಕ್ಕ ಶವ ಸಂಸ್ಕಾರ ಮಾಡಿಕೊಳ್ಳಿ ಎಂದು ಹೇಳಿ ಹೋಗಿದ್ದಾರೆ. ಆ ಜಾಗದಲ್ಲಿ ಭೋವಿ ಸಮಾಜಕ್ಕೆ ಶವ ಸಂಸ್ಕಾರ ಜಾಗ ಮೀಸಲು ಎಂದು ಹಿರಿಯರು ಮಾಡಿದ್ದಾರೆ ಎಂದು ಕೇಳಿಬಂದಿದೆ. ಆ ಜಾಗದಲ್ಲಿ ನಾವೆಲ್ಲರು ಶವ ಸಂಸ್ಕಾರ ಮಾಡಿದರೇ ಜಾಗ ಕಡಿಮೆ ಬೀಳುತ್ತದೆ. ಮೇಲಾಗಿ ನಮ್ಮ ಸಮುದಾಯ ಮತ್ತು ಅವರ ಸಮುದಾಯದ ಮಧ್ಯ ಭಿನ್ನಾಭ್ರಿಪಾಯ ಉಂಟಾಗುತ್ತದೆ. ಆದ್ದರಿಂದ ನಮ್ಮ ಸಮುದಾಯಕ್ಕೆ ಪ್ರತ್ಯೇಕ ಜಾಗ ಕಲ್ಪಿಸಬೇಕು.
-ಸಿದ್ದಣ್ಣ ಕಟ್ಟಿಮನಿ, ದಲಿತ ಮುಖಂಡ.