ಮಹಾ ಮಾನವ ಟೆಲಿಫೋನ್ ಕದ್ದಾಲಿಕೆ ಮಾಡುತ್ತಿರುವುದು ಹೊಸದಲ್ಲ. ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಕೆಲ ಮಹಿಳೆಯರನ್ನು ಸೇರಿಸಿ ಎಸ್‌ಟಿಎಫ್‌ ರಚಿಸಿ ಫೋನ್ ಕದ್ದಾಲಿಕೆ ಮಾಡಿದ್ದು ‘ಸ್ನೂಪ್‌ ಗೇಟ್‌’ ಎಂದೇ ಕುಖ್ಯಾತಿಯಾಗಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಾ ಮಾನವ ಟೆಲಿಫೋನ್ ಕದ್ದಾಲಿಕೆ ಮಾಡುತ್ತಿರುವುದು ಹೊಸದಲ್ಲ. ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಕೆಲ ಮಹಿಳೆಯರನ್ನು ಸೇರಿಸಿ ಎಸ್‌ಟಿಎಫ್‌ ರಚಿಸಿ ಫೋನ್ ಕದ್ದಾಲಿಕೆ ಮಾಡಿದ್ದು ‘ಸ್ನೂಪ್‌ ಗೇಟ್‌’ ಎಂದೇ ಕುಖ್ಯಾತಿಯಾಗಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಅಲ್ಲದೆ, ರಾಜ್ಯದಲ್ಲೇ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ವಿರುದ್ಧ ಟೆಲಿಫೋನ್‌ ಕದ್ದಾಲಿಕೆ ಆರೋಪ ಕೇಳಿ ಬಂದಿತ್ತು. ಆಗ ಅವರು ತಕ್ಷಣ ರಾಜೀನಾಮೆ ಕೊಟ್ಟಿದ್ದರು. ಅದರಲ್ಲಿ ನನ್ನದು ಸಹ ಫೋನ್ ಕದ್ದಾಲಿಕೆ ಆಗಿತ್ತು. ಸಾರ್ವಜನಿಕ ಕ್ಷೇತ್ರದಲ್ಲಿ ಬಹಳ ಸ್ಪಷ್ಟತೆ ಮತ್ತು ಪಾರದರ್ಶಕತೆ ಇರಬೇಕು ಎಂದು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಹುಲ್‌ಗಾಂಧಿ ಹೇಳಿರುವುದರಲ್ಲಿ ತಪ್ಪಿಲ್ಲ. ಮಹಾ ಮಾನವನಿಗೆ ಏನಾದರೂ 56 ಇಂಚು ಇದ್ದರೆ, ಧೈರ್ಯ ಇದೆ ಎಂದಾದರೆ, ಬಹಿರಂಗ ಚರ್ಚೆಗೆ ಬರಲಿ. ಈ ಕದ್ದಾಲಿಕೆಗಳಿಂದ ಕಾಂಗ್ರೆಸ್ ನಾಯಕರನ್ನು ಬೆದರಿಸಲು ಆಗುವುದಿಲ್ಲ ಎಂದು ತಿಳಿಸಿದರು.

ರಾಹುಲ್‌ರಿಂದ ಬಹಿರಂಗ ಹೇಳಿಕೆ:

ರಾಹುಲ್ ಗಾಂಧಿ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಮಹಾಮಾನವ ಬಹಳ ಗಂಭೀರವಾದ ಆರೋಪ ಮಾಡಿದ್ದರು. ಪ್ರತಿಪಕ್ಷದವರು ಅರ್ಬನ್ ನಕ್ಸಲರು, ದೇಶವಿರೋಧಿ ಚಟುವಟಿಕೆಯಲ್ಲಿ ಇದ್ದಾರೆ ಎಂದಿದ್ದರು. ರಾಹುಲ್ ಗಾಂಧಿಯವರು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಬಹಿರಂಗ ಚರ್ಚೆಯಾದ ದಿನವೇ ಅವರ ರಾಜಕೀಯ ಜೀವನ ಕೊನೆಯಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರೂ, ಆ ಸವಾಲು ಸ್ವೀಕರಿಸದೆ ಮಹಾಮಾನವ ಈ ಸಣ್ಣತನಕ್ಕೆ ಕೈಹಾಕಿದ್ದಾರೆ ಎಂದು ಹರಿಪ್ರಸಾದ್‌ ಟೀಕಿಸಿದರು.

‘ಯಾರು ದೇಶದ್ರೋಹಿಗಳು? ದೇಶಕ್ಕೆ ಯಾರಿಂದ ತೊಂದರೆ ಆಗುತ್ತಿದೆ? ವಿದೇಶಿ ಶಕ್ತಿಗಳು ಯಾರನ್ನು ಕೈಗೊಂಬೆಯಾಗಿ ಆಡಿಸುತ್ತಿದ್ದಾರೆ? ಇದೆಲ್ಲವೂ ಸಾಬೀತಾಗಬೇಕಾದರೆ ಅಥವಾ ವಿದೇಶಿ ಶಕ್ತಿಗಳು ಯಾರಿಗೆ ಬೆಂಬಲ ಕೊಡುತ್ತಿದ್ದಾರೆ ಎಂಬುದು ಸಾಬೀತಾಗಬೇಕಾದರೆ ಬಹಿರಂಗ ಚರ್ಚೆ ಆಗಬೇಕು. ಆಹ್ವಾನವನ್ನು ನಮ್ಮ ನಾಯಕ ರಾಹುಲ್ ಗಾಂಧಿ ಕೊಟ್ಟಿದ್ದಾರೆ. ಧೈರ್ಯವಿದ್ದರೆ ಸ್ವೀಕರಿಸಲಿ ಎಂದು ಸವಾಲು ಹಾಕಿದರು.