ಸಾರಾಂಶ
ಮಾಹಿತಿ ತಂತ್ರಜ್ಞಾನ ನೀತಿ 2025-30ರ ಅಡಿಯಲ್ಲಿ ಆಸ್ತಿ ತೆರಿಗೆ, ಉದ್ಯೋಗಿಗಳ ಭವಿಷ್ಯ ನಿಧಿ, ವಿದ್ಯುತ್ ಸುಂಕ ಮರುಪಾವತಿ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುವ ಘೋಷಣೆಯನ್ನು ರಾಜ್ಯ ಸರ್ಕಾರದಿಂದ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದಿಂದ ಬೆಂಗಳೂರಿನ ಮೇಲಾಗುತ್ತಿರುವ ಒತ್ತಡ ಕಡಿಮೆ ಮಾಡಲು ಐಟಿ ಉದ್ಯಮಗಳನ್ನು ರಾಜ್ಯದ 2ನೇ ಹಂತದ ನಗರಗಳತ್ತ ಆಕರ್ಷಿಸುವ ಉದ್ದೇಶದೊಂದಿಗೆ ಮಾಹಿತಿ ತಂತ್ರಜ್ಞಾನ ನೀತಿ 2025-30ರ ಅಡಿಯಲ್ಲಿ ಆಸ್ತಿ ತೆರಿಗೆ, ಉದ್ಯೋಗಿಗಳ ಭವಿಷ್ಯ ನಿಧಿ, ವಿದ್ಯುತ್ ಸುಂಕ ಮರುಪಾವತಿ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುವ ಘೋಷಣೆ ಮಾಡಲಾಗಿದೆ.ಸಿಲಿಕಾನ್ ಸಿಟಿ ಎಂದು ಕರೆಯಲಾಗುವ ಬೆಂಗಳೂರಿನಲ್ಲಿ ಸಾವಿರಾರು ಐಟಿ ಉದ್ಯಮಗಳಿವೆ. ಅದರ ಜತೆಗೆ ಬೆಂಗಳೂರು ಬೆಳೆಯುತ್ತಿರುವುದರಿಂದಾಗಿ ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ ಬೆಂಗಳೂರು ಹೊರತುಪಡಿಸಿ 2ನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮತ್ತು ದಾವಣಗೆರೆಗಳಲ್ಲಿ ಐಟಿ ಉದ್ಯಮ ಆರಂಭಿಸುವವರಿಗೆ 16 ಅಂಶಗಳ ಪ್ರೋತ್ಸಾಹಕಗಳನ್ನು ಘೋಷಿಸಲಾಗಿದೆ.ಸುಧಾರಿತ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಪ್ರೋತ್ಸಾಹಧನ ನೀಡುವುದು, ಇಂಟರ್ನ್‌ಶಿಪ್ ವೆಚ್ಚ ಮರುಪಾವತಿ, ನೇಮಕಾತಿ ನೆರವು, ಪ್ರತಿಭಾ ಸ್ಥಳಾಂತರ ಮರುಪಾವತಿ, ಉದ್ಯೋಗಿ ಭವಿಷ್ಯ ನಿಧಿ ಮರುಪಾವತಿ, ಕೌಶಲ್ಯ ವೆಚ್ಚ ಮರುಪಾವತಿ, ಬೋಧಕ ಅಭಿವೃದ್ಧಿ ಕಾರ್ಯಕ್ರಮಕ್ಕೆ ಬೆಂಬಲ, ಬಾಡಿಗೆ ನೆರವು, ಗುಣಮಟ್ಟದ ಪ್ರಮಾಣೀಕರಣಗಳಿಗೆ ಮರುಪಾವತಿ, ಬೌದ್ಧಿಕ ಆಸ್ತಿ ಪ್ರೋತ್ಸಾಹಧನ, ವಿದ್ಯುತ್ ದರದಲ್ಲಿ ರಿಯಾಯಿತಿ, ವಿದ್ಯುತ್ ಸುಂಕ ಮರುಪಾವತಿ, ಆಸ್ತಿ ತೆರಿಗೆ ಮರುಪಾವತಿ, ಟೆಲಿಕಾಂ ಮೂಲಸೌಕರ್ಯ ಅಭಿವೃದ್ಧಿ ಬೆಂಬಲಿಸುವುದು ಹಾಗೂ ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸಲು ನೆರವು ನೀಡುವುದಾಗಿ ತಿಳಿಸಲಾಗಿದೆ.
ಅದೇ ರೀತಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸ್ಥಾಪಿಸುವ ಉದ್ಯಮಗಳಿಗೆ 6 ಅಂಶಗಳ ಪ್ರೋತ್ಸಾಹಕಗಳನ್ನು ಘೋಷಿಸಲಾಗಿದೆ. ಸುಧಾರಿತ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಪ್ರೋತ್ಸಾಹಧನ ನೀಡುವುದು, ಇಂಟರ್ನ್‌ಶಿಪ್ ವೆಚ್ಚ ಮರುಪಾವತಿ, ಬೋಧಕ ಅಭಿವೃದ್ಧಿ ಕಾರ್ಯಕ್ರಮಕ್ಕೆ ಬೆಂಬಲ, ಗುಣಮಟ್ಟದ ಪ್ರಮಾಣೀಕರಣಗಳಿಗೆ ಮರುಪಾವತಿ, ಬೌದ್ಧಿಕ ಆಸ್ತಿ ಪ್ರೋತ್ಸಾಹಧನ ಮತ್ತು ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ನೀತಿಯಲ್ಲಿ ತಿಳಿಸಲಾಗಿದೆ.ಸಾಫ್ಟ್‌ವೇರ್ ರಫ್ತು 11.5 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ಗುರಿ:
ಎರಡನೇ ಹಂತದ ನಗರಗಳತ್ತ ಐಟಿ ಉದ್ಯಮವನ್ನು ಕೊಂಡೊಯ್ಯುವ ಮೂಲಕ 2030ರ ವೇಳೆಗೆ ರಾಜ್ಯದ ಸಾಫ್ಟ್‌ವೇರ್ ರಫ್ತನ್ನು ಹಾಲಿ ಇರುವ 4.09 ಲಕ್ಷ ಕೋಟಿ ರು.ಗಳಿಂದ 11.5 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅಲ್ಲದೆ, ಕೃತಕ ಬುದ್ಧಿಮತ್ತೆ ಸೇರಿದಂತೆ ಇತರ ನೂತನ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶ ಹೊಂದಲಾಗಿದೆ. ಹಾಗೆಯೇ, ಕರ್ನಾಟಕವನ್ನು ಕೃತಕ ಬುದ್ಧಿಮತ್ತೆಯ ತಾಣವಾಗಿಸುವ ಗುರಿ ಹೊಂದಲಾಗಿದೆ. ಹಾಗೆಯೇ, 2025-30ರ ಐಟಿ ನೀತಿ ಜಾರಿಗೆ 445.50 ಕೋಟಿ ರು. ವ್ಯಯಿಸಲು ನಿಗದಿ ಮಾಡಲಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))