ಸಾರಾಂಶ
ಕ್ರೀಡಾ ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ವ್ಹಾಲಿಬಾಲ್ ತರಬೇತುದಾರ ರಫೀಕ್ ನದಾಫ್ ಅವರು ಮಾತನಾಡಿ, ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಕನ್ನಡಪ್ರಭವಾರ್ತೆ ಕೊಲ್ಹಾರ
ಪ್ರತಿಭಾವಂತ ಕ್ರೀಡಾಪಟುಗಳಿಗೆ ಸರ್ಕಾರದ ಕ್ರೀಡಾ ವಸತಿ ನಿಲಯದ ಮೂಲಕ ಸೂಕ್ತ ತರಬೇತಿ , ತಾಂತ್ರಿಕ ಕ್ರೀಡಾ ಕೌಶಲ್ಯ ದೊರೆಯುತ್ತಿದ್ದು, ಕ್ರೀಡಾಪಟುಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವ್ಹಾಲಿಬಾಲ್ ತರಬೇತುದಾರ ರಫೀಕ್ ನದಾಫ್ ಹೇಳಿದರು.ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ಜಿಲ್ಲಾ ಪಂಚಾಯತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯಪುರ ವತಿಯಿಂದ ಹಮ್ಮಿಕೊಂಡ 2024-25ನೇ ಸಾಲಿಗೆ ಕ್ರೀಡಾ ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೌಲಭ್ಯ ವಂಚಿತ ಕ್ರೀಡಾಪಟುಗಳನ್ನು ಗುರುತಿಸಿ ಪೂರ್ಣ ಪ್ರಮಾಣದ ಸರ್ಕಾರದಿಂದ ನೆರವು ಕೊಡಿಸಿ, ಭವಿಷ್ಯದ ಪ್ರತಿಭಾವಂತ ಕ್ರೀಡಾಪಟುಗಳನ್ನಾಗಿ ಮಾಡುವ ಉದ್ದೇಶದಿಂದ ಯುವ ಸಬಲೀಕರಣ ,ಕ್ರೀಡಾ ಇಲಾಖೆ ಪ್ರತಿ ವರ್ಷ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳುತ್ತಿದೆ ಎಂದರು.ಸಂಗಮೇಶ್ವರ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಮೇಶ ತೋಟದ ಮಾತನಾಡಿ, ತಾಲೂಕಿನ ವಿವಿಧ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 4,7 ಹಾಗೂ 10ನೇ ತರಗತಿಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಒಂದು ಆಯ್ಕೆ ಪ್ರಕ್ರಿಯೆಯಲ್ಲಿ ನೀವು ಆಯ್ಕೆಯಾಗಿದ್ದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ತಾಲೂಕಾದ್ಯಂತ ನೂರಾರು ಯುವ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ವ್ಹಾಲಿಬಾಲ್ ಹಾಗೂ ಜಿಮ್ ಸೇರಿದಂತೆ ಅನೇಕ ಆಟೋಟಗಳಿಗೆ ಯುವಕ-ಯುವತಿಯರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಮ್ ತರಬೇತುದಾರ ಶಿವಾ ಅಮರಪ್ಪಗೋಳ, ಸಂಗಮೆಶ್ವರ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಉಪಸ್ಥಿತರಿದ್ದರು.