ವರಮಹಾಲಕ್ಷ್ಮೀ ಹಬ್ಬಕ್ಕೆ ಭರ್ಜರಿ ತಯಾರಿ

| Published : Aug 16 2024, 12:46 AM IST

ಸಾರಾಂಶ

ಪಂಚಮಿ ಹಬ್ಬದ ಬಳಿಕ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು.

ಹಾವೇರಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮೀ ಹಬಕ್ಕೆ ಭರ್ಜರಿ ತಯಾರಿ ನಡೆಸಿರುವ ಜನತೆ, ಮುನ್ನಾದಿನ ಗುರುವಾರ ನಗರದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.

ಪಂಚಮಿ ಹಬ್ಬದ ಬಳಿಕ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು. ವಾರದ ಸಂತೆ ದಿನವಾದ ಗುರುವಾರ ಪೂಜೆಗಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನತೆ ಮಗ್ನವಾಗಿದ್ದರು. ಹೂವು, ಹಣ್ಣು, ಬಾಳೆಕಂಬ, ತರಕಾರಿ ಖರೀದಿ ಬಲುಜೋರಾಗಿತ್ತು. ಸಿಹಿ ತಿಂಡಿಗಳು ಹಾಗೂ ಹೊಸ ಬಟ್ಟೆಗಳೊಂದಿಗೆ ವರಮಹಾಲಕ್ಷ್ಮೀಯನ್ನು ಮನೆಗೆ ಸ್ವಾಗತಿಸಲು ತಯಾರಿ ನಡೆಸಿದರು. ಹಣ್ಣು, ಹೂವು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೂ ಮಾರುಕಟ್ಟೆಯಲ್ಲಿ ಹಬ್ಬಕ್ಕಾಗಿ ಹೂವು, ಹಣ್ಣುಗಳು ಹಾಗೂ ಬಾಳೆಕಂಬಗಳ ಮಾರಾಟ ಭರ್ಜರಿಯಾಗಿತ್ತು. ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ವ್ಯಾಪಾರಿಗಳೊಂದಿಗೆ ಚೌಕಾಸಿ ನಡೆಸಿ ಖರೀದಿಸುವ ದೃಶ್ಯ ಕಂಡು ಬಂತು.

ಮಾರುಕಟ್ಟೆಯಲ್ಲಿ ಸೀರೆ ಸೇರಿದಂತೆ ಅಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಪ್ರತಿಯೊಂದು ಅಂಗಡಿಗಳು ಜನದಟ್ಟನೆಯಿಂದ ಕೂಡಿದ್ದವು. ಲಕ್ಷ್ಮೀ ಪೂಜೆಗಾಗಿ ಸೀರೆ ಖರೀದಿಸುವ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳಲ್ಲಿ ಜನರು ಹೆಚ್ಚಾಗಿ ಕಂಡುಬಂದರು.

ಪೂಜಾ ಮುನ್ನಾದಿನವೇ ಎಲ್ಲ ವಸ್ತುಗಳನ್ನು ಜನರು ಖರೀದಿಸಲು ಮಾರುಕಟ್ಟೆಗೆ ಆಗಮಿಸಿದ್ದರಿಂದ ನಗರದ ಎಂ.ಜಿ.ರೋಡ್, ಎಲ್‌ಬಿಎಸ್ ಮಾರುಕಟ್ಟೆಯಲ್ಲಿ ವಾಹನಗಳ ಸಂಚಾರ ಹೆಚ್ಚಳವಾಗಿತ್ತು.