ಮೂರೂ ಪಕ್ಷದ ಅಭ್ಯರ್ಥಿಗಳಿಂದ ಭರ್ಜರಿ ರೋಡ್‌ ಶೋ

| Published : May 05 2024, 02:01 AM IST

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ ಬಿರುಸಿನ ಪ್ರಚಾರ ನಡೆಯಿತು. ಈ ವೇಳೆ ಸ್ವತಂತ್ರ್ಯ ಅಭ್ಯರ್ಥಿ ಈಶ್ವರಪ್ಪ ಬೆಂಬಲಕ್ಕೆ ಜನ ಸಾಗರವೇ ನೆರದಿತ್ತು. ಇನ್ನು ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಪರ ಶಾಸಕ ಚನ್ನಬಸಪ್ಪ ಮತಬೇಟೆ ನಡೆಸಿದರು. ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಪರ ಅದ್ಧೂರಿ ರೋಡ್‌ ಶೋ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶನಿವಾರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಕಾಂಗ್ರೆಸ್‌ ಅಭ್ಯರ್ಥಿ ಗೀತಾ, ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಅವರು ಶಿವಮೊಗ್ಗ ನಗರದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು.

ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ವಿಜಯದೆಡೆಗೆ ನಡೆಗೆ ಆರಂಭಿಸಿದ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಅವರು ಗಾಂಧಿ ಬಜಾರ್‌, ಅಮೀರ್‌ ಅಹಮ್ಮದ್‌ ವೃತ್ತ, ನೆಹರು ರಸ್ತೆ ಮಾರ್ಗವಾಗಿ ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ವೃತ್ತದವರೆಗೆ ರೋಡ್‌ ಶೋ ನಡೆಸಿದರು.

ಮೆರವಣಿಗೆಯಲ್ಲಿ ಜನ ಸಾಗರವೇ ಕಂಡು ಬಂದಿತು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು, ಯುವಕರು ಅತಿ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಕೆ.ಎಸ್.ಈಶ್ವರಪ್ಪ ರವರಿಗೆ ಬೆಂಬಲ ಸೂಚಿಸಿದರು ಯುವಕ ಯುವತಿಯರು ಮಹಿಳೆಯರು ಡೊಳ್ಳಿನ ಸದ್ದಿಗೆ ಹೆಜ್ಜೆ ಹಾಕುತ್ತಾ ಸಾಗಿದರು ಒಟ್ಟಿನಲ್ಲಿ ಕೆ.ಎಸ್.ಈಶ್ವರಪ್ಪರವರ ರೋಡ್ ಶೋ ಅವರದೇ ವಿಜಯೋತ್ಸವದ ಮುನ್ನುಡಿಯಂತೆ ಕಾಣುತ್ತಿತ್ತು.

ಈ ಸಂದರ್ಭ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ಮಹಾನಗರ ಪಾಲಿಕೆ ಮಾಜಿ ಮೇಯರ್‌ ಸುವರ್ಣ ಶಂಕರ್‌, ಮಾಜಿ ಸದಸ್ಯ ವಿಶ್ವಾಸ್‌ ಸೇರಿದಂತೆ ಹಲವರು ಇದ್ದರು.

ಕಮಲದ ಗುರುತಿಗೆ ಮತ ನೀಡಿ:

ನಗರದ ಆಟೋ ಕಾಂಪ್ಲೆಕ್ಸ್‌ನಲ್ಲಿ ಬಿಜೆಪಿ ವತಿಯಿಂದ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕಮಲದ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಎಸ್.ರುದ್ರೇಗೌಡ, ಮುಖಂಡರಾದ ಎಸ್. ದತ್ತಾತ್ರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹಾಗೂ ಇತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಅಭ್ಯರ್ಥಿಯಿಂದ ರೋಡ್‌ ಶೋ:

ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರು ಶನಿವಾರ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಬಸ್ ನಿಲ್ದಾಣದಿಂದ, ಮೇದರ್ ಕೇರಿ, ಪೊಲೀಸ್ ಚೌಕಿ ಫೈಓವರ್ ನಿಂದ ಕಾಶಿಪುರ, ಆಲ್ಕೊಳ ವೃತ್ತ, ಗಾಡಿಕೊಪ್ಪ ಪುನಃ ಆಲ್ಕೊಳ ವೃತ್ತ, ಗೋಪಾಳ ರಸ್ತೆ ಮೂಲಕ ಗೋಪಾಳ ಬಸ್ ನಿಲ್ದಾಣದಿಂದ ಗೋಪಾಳ ಮುಖ್ಯರಸ್ತೆ, ಟಿಪ್ಪು ನಗರ ಮುಖ್ಯರಸ್ತೆ ಮೂಲಕ ಅಣ್ಣಾನಗರ ಮಿಳಗಟ್ಟ, ಇಂದಿರಾ ಕ್ಯಾಂಟೀನ್ ಮುಂಭಾಗದಿಂದ, ಕೆ.ಎಸ್.ಆರ್.ಟಿ.ಸಿ. ಮುಂಭಾಗದಿಂದ, ಡಬಲ್ ರೋಡ್, ಎನ್.ಟಿ. ರಸ್ತೆ ಬಲಭಾಗದವರೆಗೆ ಹರಕೆರೆ, ಕುರುಬರ ಪಾಳ್ಯದಿಂದ ಸೀಗೇಹಳ್ಳಿ ವೃತ್ತದವರೆಗೆ ನಡೆದ ರೋಡ್‌ ಶೋ ನಡೆಸಿದರು.