ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ ನಾರಾಯಣಗುರುಗಳು: ಸಂಸದ ಕೋಟ

| Published : Aug 21 2024, 12:41 AM IST

ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ ನಾರಾಯಣಗುರುಗಳು: ಸಂಸದ ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಿಲ್ಲಾಡಳಿತ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಆಯೋಜಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಶತಮಾನಗಳ ಹಿಂದೆ ಸಮಪಾಲು- ಸಮಬಾಳು ಎಂದು ಧ್ವನಿ ಎತ್ತಿದ ನಾರಾಯಣಗುರುಗಳು, ಯಾವುದೇ ರಕ್ತ ಕ್ರಾಂತಿ ಇಲ್ಲದೇ ತಮ್ಮ ವಿಚಾರ ಹಾಗೂ ಬದ್ಧತೆಗಳ ಮೂಲಕ ಸಮಾಜದಲ್ಲಿನ ಮೇಲು - ಕೀಳು ಎಂಬ ಅಂಧಕಾರಗಳ ವಿರುದ್ಧ ಹೋರಾಡಿದ ಮಹಾನ್ ಸಂತ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಮಂಗಳವಾರ ಇಲ್ಲಿನ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಾರಾಯಣಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರು ಸಮಾನತೆಯಿಂದ ಬದುಕಬೇಕು ಎಂಬ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತಿದರು. ಮಾನವರೆಲ್ಲರೂ ಒಂದೇ ಎಂಬ ತತ್ವವನ್ನು ವಿಶ್ವಕ್ಕೆ ಸಾರಿದರು. ಹಿಂದುಳಿದ ವರ್ಗಗಳ ಏಳಿಗೆಯಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದರು.ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಶ್ರೇಯಸ್ ಕೋಟ್ಯಾನ್ ಉಪನ್ಯಾಸ ನೀಡಿ, ತಳ ಸಮುದಾಯವನ್ನು ಒಗ್ಗೂಟಿಸುವ ಉದ್ದೇಶದಿಂದ ಧಾರ್ಮಿಕ ಕ್ರಾಂತಿಯನ್ನು ಪ್ರಾರಂಭಿಸಿದ ನಾರಾಯಣಗುರುಗಳು, ದೇವಸ್ಥಾನಗಳು, ಶೈಕ್ಷಣಿಕ ಹಾಗೂ ಕೈಗಾರಿಕಾ ಕೇಂದ್ರಗಳಾಗಿ ಬದಲಾಗಬೇಕು ಎಂಬ ಪರಿಕಲ್ಪನೆ ಹೊಂದಿದ್ದರು. ದೇವಸ್ಥಾನಗಳನ್ನು ಸಾಮಾಜಿಕ ಕ್ರಾಂತಿಯ ಒಂದು ಮಾರ್ಗವಾಗಿ ಉಪಯೋಗಿಸುವುದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ತಳ ಸಮುದಾಯದ ಮಕ್ಕಳಿಗೆ ಪ್ರವೇಶ ನೀಡುವಂತೆ ಅನೇಕ ಚಳುವಳಿಗಳನ್ನು ಮಾಡುವ ಮೂಲಕ ತಳಸಮುದಾಯದ ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುವಲ್ಲಿ ಶ್ರಮಿಸಿದರು ಎಂದು ಹೇಳಿದರು.

ಈ ಸಂದರ್ಭ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಪ್ರಯುಕ್ತ ಅಯೋಜಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಲ್ಪೆ ಸೆಂಟ್ರಲ್ ವಾರ್ಡ್ ನಗರಸಭಾ ಸದಸ್ಯೆ ಎಡ್ಲೀನ್ ಕರ್ಕಡ, ತಹಸೀಲ್ದಾರ್ ಗುರುಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಶತಮಾನೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಎ. ಸುವರ್ಣ, ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯಿನಿ ಸಂಧ್ಯಾ, ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ತೇಜಸ್ ನಿರೂಪಿಸಿದರು. ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ವಂದಿಸಿದರು.