ನಗರದಲ್ಲಿ ಸುಮಾರು ₹ನಾಲ್ಕು ಕೋಟಿ ವೆಚ್ಚದಲ್ಲಿ ೧೬ ಅಂಗನವಾಡಿಗಳ ನಿರ್ಮಾಣ ಮಾಡಿಕೊಡುವುದರ ಜೊತೆಗೆ ನಗರದಲ್ಲಿ ಅವಶ್ಯವಿರುವ ಬಸ್ ತಂಗುದಾಣ, ಅಟೋ ನಿಲ್ದಾಣ, ಉದ್ಯಾನವನ, ಬಿಸಿಯೂಟ ಕೊಠಡಿ ಸೇರಿ ಅಂದಾಜು ₹೧೦ ಕೋಟಿಗೂ ಹೆಚ್ಚು ವೆಚ್ಚ ಮಾಡುವ ಮೂಲಕ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದೆ.

ನಗರದಲ್ಲಿ ೧೬ ಅಂಗನವಾಡಿಗಳ ನಿರ್ಮಾಣ । ವಿವಿಧ ಕಾರ್ಯಕ್ಕೆ ₹೧೦ ಕೋಟಿಗೂ ಹೆಚ್ಚು ವೆಚ್ಚ

ಕನ್ನಡಪ್ರಭ ವಾರ್ತೆ ದಾಂಡೇಲಿ

ನಗರದಲ್ಲಿ ಸುಮಾರು ₹ನಾಲ್ಕು ಕೋಟಿ ವೆಚ್ಚದಲ್ಲಿ ೧೬ ಅಂಗನವಾಡಿಗಳ ನಿರ್ಮಾಣ ಮಾಡಿಕೊಡುವುದರ ಜೊತೆಗೆ ನಗರದಲ್ಲಿ ಅವಶ್ಯವಿರುವ ಬಸ್ ತಂಗುದಾಣ, ಅಟೋ ನಿಲ್ದಾಣ, ಉದ್ಯಾನವನ, ಬಿಸಿಯೂಟ ಕೊಠಡಿ ಸೇರಿ ಅಂದಾಜು ₹೧೦ ಕೋಟಿಗೂ ಹೆಚ್ಚು ವೆಚ್ಚ ಮಾಡುವ ಮೂಲಕ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದೆ.ನಗರದ ಅಭಿವೃದ್ಧಿ ಕೆಲಸ ಹಾಗೂ ಸೇವಾ ಕಾರ್ಯಗಳನ್ನು ವೆಸ್ಟ ಕೋಸ್ಟ್ ಕಾಗದ ಕಾರ್ಖಾನೆ ಮಾಡುತ್ತಿದೆ. ಪ್ರತಿವರ್ಷ ಕೋಟಿಕೋಟಿ ರೂ.ಗಳನ್ನು ಸಾರ್ವಜನಿಕ ವಲಯಕ್ಕಾಗಿ ವ್ಯಯಿಸುತ್ತಿರುವ ಕಾಗದ ಕಾರ್ಖಾನೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯ ನಿಜವಾದ ಅರ್ಥವನ್ನು ತಿಳಿಸಿಕೊಡುತ್ತಿದೆ.

ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾಗಳಲ್ಲಿ ₹೫ ಲಕ್ಷ ವೆಚ್ಚದಲ್ಲಿ ೫ ಅಟೋ ನಿಲ್ದಾಣಗಳನ್ನು, ಹಳಿಯಾಳ ದುಸಗಿಯಲ್ಲಿ ₹೮೦ ಲಕ್ಷ ವೆಚ್ಚದಲ್ಲಿ ೨ ಗೋ ಶಾಲೆಗಳು, ₹೩೦ ಲಕ್ಷ ವೆಚ್ಚದಲ್ಲಿ ೧೦ ಬಸ್ ತಂಗುದಾಣಗಳು, ಹಲವಾರು ಶಾಲೆಗಳಿಗೆ ಸುಮಾರು ₹೧.೧೪ ಕೋಟಿ ವೆಚ್ಚದಲ್ಲಿ ಬಿಸಿಯೂಟ ಕೊಠಡಿಗಳ ನಿರ್ಮಾಣ, ₹೧.೦೮ ಕೋಟಿ ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ, ₹೧೩ ಲಕ್ಷ ವೆಚ್ಚದಲ್ಲಿ ಅಂಬೇವಾಡಿಯ ಗಾರ್ಡನ್ ನಿರ್ಮಾಣ, ₹೨೧ ಲಕ್ಷ ಗಳಲ್ಲಿ ಹಲವು ಗಾರ್ಡನಗಳಲ್ಲಿ ಜಿಮ್ ವ್ಯವಸ್ಥೆ, ಪ್ರತಿ ವರ್ಷ ₹೬ ಲಕ್ಷಕ್ಕೂ ಹೆಚ್ಚಿನ ಖರ್ಚು ಮಾಡಿ ಬಟ್ಟೆ ಚೀಲ ವಿತರಣೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಸ್ಮಶಾನಗಳ ಅಭಿವೃದ್ಧಿಗಾಗಿ ₹೩೦ ಲಕ್ಷ ದಾಂಡೇಲಿ ಜೋಯಿಡಾದ ಆಸ್ಪತ್ರೆಗಳಿಗೆ ₹೩೦ ಲಕ್ಷ ವೆಚ್ಚದಲ್ಲಿ ಹಲವು ಪರಿಕರಗಳ ಕೊಡುಗೆ, ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ಛತ್ರಿಗಳ ವಿತರಣೆ, ಶಾಲೆ, ಆಸ್ಪತ್ರೆ, ಗ್ರಂಥಾಲಯಗಳಿಗೆ ₹೨೫ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವಾಟರ್ ಫಿಲ್ಟರ್ ಕೊಡುಗೆ, ವಿವಿಧ ಶಾಲಾ ಕಾಲೇಜುಗಳಿಗೆ ₹೮೦ ಲಕ್ಷ ವೆಚ್ಚದಲ್ಲಿ ಡೆಸ್ಕ್, ಬೆಂಚ್, ಸೆನಿಟರಿ ಮಷೀನ್ ಸೇರಿದಂತೆ ಹಲವು ಪರಿಕರಗಳ ಕೊಡುಗೆ, ಶಾಲಾ ಕಾಲೇಜುಗಳಿಗೆ ಕಂಪ್ಯೂಟರ್ ಸೇರಿದಂತೆ ಹಲವು ಸಾಮಗ್ರಿಗಳ ಕೊಡುಗೆ, ಹಲವಾರು ಸಂಘ-ಸಂಸ್ಥೆಗಳಿಗೆ ಪೀಠೋಪಕರಣಗಳ ವ್ಯವಸ್ಥೆ ಹೀಗೆ ಹತ್ತುಹಲವಾರು ರೀತಿಯ ಸಾರ್ವಜನಿಕ ಸೇವಾ ಕೊಡುಗೆಗಳನ್ನು ಕಾರ್ಖಾನೆ ಕೆಲವೇ ವರ್ಷದಲ್ಲಿ ಅಂದಾಜು ₹೧೦ ಕೋಟಿ ಖರ್ಚು ಮಾಡಿದೆ.

ಇದರ ಹೊರತಾಗಿಯೂ ಹಲವಾರು ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ ಕಾರ್ಯಗಳಿಗೆ ಕೂಡ ದನಸಹಾಯವನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕುಗಳು ಅಷ್ಟೇ ಅಲ್ಲದೆ ಗೋಕರ್ಣದ ಕೋಟಿ ತೀರ್ಥ ಸ್ವಚ್ಛತೆ ಕಾರ್ಯದಲ್ಲಿ ಧನಸಹಾಯ ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುತ್ತಾ ಬರುತ್ತಿದೆ ಎಂದು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ಅಧಿಕಾರಿ ಜೆ.ಆರ್. ರಾಘವೇಂದ್ರ ಮತ್ತು ರಾಜೇಶ ತಿವಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.