ವರ್ಷದ ಆರಂಭದಂದೇ ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ತಂತ್ರ

| Published : Jan 02 2024, 02:15 AM IST

ವರ್ಷದ ಆರಂಭದಂದೇ ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ತಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಗಳ ಕಸರತ್ತು ಚಿತ್ರದುರ್ಗದಲ್ಲಿ ಭರ್ಜರಿಯಾಗಿ ಆರಂಭವಾಗಿದೆ.

ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಗಳ ಕಸರತ್ತು ಚಿತ್ರದುರ್ಗದಲ್ಲಿ ಭರ್ಜರಿಯಾಗಿ ಆರಂಭವಾಗಿದೆ. ಹೊಸ ವರ್ಷದ ಆರಂಭದ ದಿನವಾದ ಸೋಮವಾರ ಆಕಾಂಕ್ಷಿಗಳು ಮೂರು ಕಡೆ ಸಭೆ ನಡೆಸುವುದರ ಮೂಲಕ ಸಮತದಾರರಿಗೆ ಶುಭ ಕೋರುವುದರ ಜೊತೆಗೆ ಆಕಾಂಕ್ಷಿಗಳು ಎನ್ನುವ ಸಂಗತಿ ಪರೋಕ್ಷವಾಗಿ ರವಾನಿಸಿದರು. ಪತ್ರಕರ್ತರ ಭವನದಲ್ಲಿ ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಕಚೇರಿಯಲ್ಲಿ ನೇರಲಗುಂಟೆ ರಾಮಪ್ಪ, ಪ್ರವಾಸಿ ಮಂದಿರದಲ್ಲಿ ಡಾ.ಬಿ.ತಿಪ್ಪೇಸ್ವಾಮಿ ಸಭೆ ಮಾಡಿ ಗಮನ ಸೆಳೆದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಆಂಜನೇಯ, ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಕೈ ಹಿಡಿಯುವುದರ ಮೂಲಕ ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿ ಆಡಳಿತ ವೈಫಲ್ಯ, ಅಭದ್ರತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆಡಳಿತದಿಂದ ಜನರು ಬೇಸತ್ತು ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶ ನೀಡಿದ್ದರು. ಚುನಾವಣೆ ಭರವಸೆಯಂತೆ 5 ಗ್ಯಾರೆಂಟಿ ಜಾರಿ ಮಾಡುವ ಮೂಲಕ ಬಡವರ ಪರ ಇರುವ ಸರ್ಕಾರ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದೇವೆ. ಬಿಜೆಪಿಯವರು ಗ್ಯಾರೆಂಟಿಗಳಿಂದ ಕರ್ನಾಟಕ ಪಾಕಿಸ್ತಾನ ಆಗುತ್ತದೆ ಎನ್ನುವ ಆರೋಪ ಮಾಡಿದ್ದರು. ಆದರೆ, 14 ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಆರ್ಥಿಕ ತಜ್ಞ, ಅವರು ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ದೇಶದಲ್ಲಿ ಸಿದ್ದರಾಮಯ್ಯ ನಂ.1 ಮುಖ್ಯಮಂತ್ರಿಗಳಾಗಿದ್ದಾರೆ. 14 ಬಾರಿ ಆಯವ್ಯಯವನ್ನು ಮಂಡಿಸುವುದರ ಮೂಲಕ ಉತ್ತಮ ಅರ್ಥಿಕ ತಜ್ಞರಾಗಿದ್ದಾರೆ ಎಂದರು.

ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಖ್ಯವಲ್ಲ. ಪಕ್ಷದ ಗೆಲುವು ಮಾತ್ರ ಮುಖ್ಯ. ಈ ಉದ್ದೇಶದಿಂದ ಪಕ್ಷವನ್ನು ಪುನಃ ತಳಮಟ್ಟದಿಂದ ಸಂಘಟಿಸುವ ಕಾರ್ಯ ನಡೆಯುತ್ತಿದೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಜತೆಗೆ ಪಕ್ಷದ ಹೈಕಮಾಂಡ್ ಜಿಲ್ಲೆಯ ಮೂವರಿಗೆ ಪದಾಧಿಕಾರಿಗಳ ಹುದ್ದೆ ನೀಡಿದೆ. ಮುಂಬರುವ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದರು.

ಸಚಿವ ಮಹಾದೇವಪ್ಪ ಲೋಕಸಭೆ ಕ್ಷೇತ್ರದ ವೀಕ್ಷಕರಾಗಿ ಬಂದಿದ್ದಾಗ ಹೊರಗಿನವರು ಎಂದು ಯಾವ ಕಾರ್ಯಕರ್ತರು ವಿರೋಧ ಮಾಡಿಲ್ಲ. ಅಲ್ಲಿ ಗಲಾಟೆ ಮಾಡಿದವರಲ್ಲಿ ನಮ್ಮ ಕಾರ್ಯಕರ್ತರು ಇರಲಿಲ್ಲ. ಲೋಕಸಭೆ ಚುನಾವಣೆಗೆ ಬಹಳಷ್ಟು ಜನ ಆಕಾಂಕ್ಷಿಗಳಿದ್ದೇವೆ. ಇಲ್ಲಿ ಯಾರು ಅಭ್ಯರ್ಥಿ ಎನ್ನುವುದಕ್ಕಿಂತ ಪಕ್ಷ ಗೆಲ್ಲಬೇಕು. ಕಾಂಗ್ರೆಸ್ ಕೇಂದ್ರದಲ್ಲೂ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ಲಕ್ಷ್ಮೀಕಾಂತ್, ಪ್ರಕಾಶ್ ರಾಮನಾಯ್ಕ್, ಎನ್.ಡಿ.ಕುಮಾರ್ ಇದ್ದರು.