ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವಸತಿ ಕಟ್ಟಡಗಳ ಸ್ವಾಧೀನಾನುಭವ ಪತ್ರ (ಒಸಿ) ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಸೀಮಿತಗೊಳಿಸಿರುವ ವಿನಾಯ್ತಿಯನ್ನು ರಾಜ್ಯಕ್ಕೆ ಅನ್ವಯವಾಗುವಂತೆ ಪರಿಷ್ಕರಿಸಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 1200 ಚದರಡಿ (30x40) ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ನೆಲ ಮತ್ತು 2 ಅಂತಸ್ತು, ಸ್ಟಿಲ್ಟ್ ಮತ್ತು 3 ಅಂತಸ್ತಿನ ವಸತಿ ಕಟ್ಟಡಗಳೊಗೆ ಒಸಿ ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು, ಕಳೆದ ಎಂಟು ತಿಂಗಳಿಂದ ಮನೆಗಳನ್ನು ನಿರ್ಮಿಸಿ ವಿದ್ಯುತ್, ನೀರಿನ ಸಂಪರ್ಕ ಇಲ್ಲದೆ ಪರಿತಪಿಸುತ್ತಿದ್ದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ ಈ ತಾರತಮ್ಯ ನೀತಿಯಿಂದ ರಾಜ್ಯದ ಇತರೆ ಜಿಲ್ಲೆಗಳ ಜನರಿಗೆ ಅನ್ಯಾಯವಾದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಸರ್ಕಾರದ ಯಾವುದೇ ಒಂದು ಕಾನೂನು ಅಥವಾ ನಿಯಮಗಳು ಒಂದು ಸೀಮಿತ ಪ್ರದೇಶಕ್ಕೆ ಅನ್ವಯವಾಗುವುದು ಸರಿಯಲ್ಲ. ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ 30x40 ಅಳತೆ ನಿವೇಶನದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನ ಮನೆ ನಿರ್ಮಿಸಿದ್ದಾರೆ. ಹಿಂದೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಪಡೆಯಲು ಒಸಿ ಅಗತ್ಯವಿರಲಿಲ್ಲ. ಆದರೆ ಈಗ ಒಸಿ ಕಡ್ಡಾಯವಾಗಿರುವುದರಿಂದ ಮನೆ ನಿರ್ಮಿಸಿರುವವರು ಕಂಗಾಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಆದ್ದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಸಿಗೆ ವಿನಾಯಿತಿ ನೀಡಿರುವುದನ್ನು ರಾಜ್ಯಾದ್ಯಂತ ಅನ್ವಯಿಸುವಂತೆ ವಿಸ್ತರಿಸಬೇಕು. ಒಂದು ಪ್ರದೇಶಕ್ಕೆ ಸೀಮಿತವಾದ ಆದೇಶವನ್ನು ಪರಿಷ್ಕರಣೆ ಮಾಡಿ, ಎಲ್ಲರಿಗೂ ಅನುಕೂಲವಾಗುವಂತೆ ಕ್ರಮ ವಹಿಸಬೇಕು. ಈ ಸಂಬಂಧ ಮುಖ್ಯಮಂತ್ರಿಗಳು ಸಂಬಂಧಪಟ್ಟವರಿಗೆ ತಕ್ಷಣ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.