ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಬೆರಕೆ ರಹಿತ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಜಿಲ್ಲಾ ಹಾಲು ಒಕ್ಕೂಟ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜಿಲ್ಲೆಯ ಜನರ ಬೇಡಿಕೆಯನ್ನು ಪೂರೈಸುವಷ್ಟು ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಜಿಲ್ಲೆ ಹೊಂದಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಬೆರಕೆ ರಹಿತ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಜಿಲ್ಲಾ ಹಾಲು ಒಕ್ಕೂಟ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜಿಲ್ಲೆಯ ಜನರ ಬೇಡಿಕೆಯನ್ನು ಪೂರೈಸುವಷ್ಟು ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಜಿಲ್ಲೆ ಹೊಂದಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡ ಉದ್ಘಾಟನೆ ಹಾಗೂ ರಜತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ಹಾಲು ಉತ್ಪಾದಕರೇ ಸಂಘದ ಬಹುದೊಡ್ಡ ಶಕ್ತಿಯಾಗಿದ್ದಾರೆ. ಕರಾವಳಿ ಭಾಗದಲ್ಲಿ ಹಾಲು ಉತ್ಪಾದನೆ ಮಾಡುವುದು ಹಲವು ಸವಾಲುಗಳ ನಡುವೆಯೇ ಸಾಧ್ಯವಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಂದರಾಮ ರೈ ಮಾತನಾಡಿ, ಗುಡ್ಡೆಯಂಗಡಿ ಭಾಗದ ಹೈನುಗಾರರ ಪ್ರಾಮಾಣಿಕ ಸೇವೆ ಹಾಗೂ ಸಂಘದ ಹಿರಿಯರ ಪರಿಶ್ರಮದ ಫಲವಾಗಿ ಸಂಸ್ಥೆ ರಜತ ಸಂಭ್ರಮ ಆಚರಿಸುವಂತಾಗಿದೆ ಎಂದರು.

ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ನಿರ್ದೇಶಕರಾದ ಸುಚರಿತ ಶೆಟ್ಟಿ, ಬಿ. ಸುಧಾಕರ ರೈ ಹಾಗೂ ಸವಿತಾ ಎನ್. ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ರವಿರಾಜ್ ಉಡುಪ, ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸುಂದರ ಶೆಟ್ಟಿ, ವಿಸ್ತರಣಾಧಿಕಾರಿ ಸುಚಿತ್ರ ಇದ್ದರು.

ಸಂಘಕ್ಕೆ ಹಲವಾರು ವರ್ಷಗಳಿಂದ ಹಾಲು ನೀಡುತ್ತಿದ್ದ ಹಿರಿಯ ಸದಸ್ಯ ಸುಲೈಮಾನ್ ಅವರನ್ನು ಹಾಗೂ ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಂಘದ ಬೆಳವಣಿಗೆಗೆ ಸಹಕರಿಸಿದ ಸಹೃದಯರನ್ನು ಸನ್ಮಾನಿಸಲಾಯಿತು. ಅತೀ ಹೆಚ್ಚು ಹಾಲು ಹಾಕಿದ ಮೂರು ಜನ ಕೃಷಿಕರನ್ನು ಹಾಗೂ ವಿಶೇಷ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.

ಕಾರ್ಯನಿರ್ವಹಣಾಧಿಕಾರಿ ಸುಶ್ಮಿತಾ ಸ್ವಾಗತಿಸಿದರು. ದ.ಕ. ಹಾಲು ಒಕ್ಕೂಟದ ಉಪವ್ಯವಸ್ಥಾಪಕಿ ಜಾನೆಟ್ ರೊಸಾರಿಯೋ ವಂದಿಸಿದರು. ಪ್ರಾಂಶುಪಾಲ ಮಹೇಶ್ ಶೆಟ್ಟಿ ನಿರೂಪಿಸಿದರು.