ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸಣ್ಣ ನೀರಾವರಿ ಇಲಾಖೆ ಹಾಗೂ ಕಾವೇರಿ ನಿಗಮದ ವ್ಯಾಪ್ತಿಗೆ ಬರುವ ಕೆರೆಗಳನ್ನು ಅಭಿವೃದ್ಧಿಪಡಿಸಿ, ಅಂತರ್ಜಲ ವೃದ್ಧಿ, ಜನ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸಲು, ಕೆರೆಗಳಿಗೆ ಕಾಯಕಲ್ಪ ನೀಡಲು ಒತ್ತು ನೀಡಲಾಗುತ್ತಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.ತಾಲೂಕಿನ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಯಡಿಯೂರು ಕೆರೆ, ಕಥಾನಾಯಕನ ಕೆರೆ, ಎಣ್ಣೆಹೊಳೆ ಕೆರೆ ಹಾಗೂ ಹರದಹಳ್ಳಿ ಕೆರೆಗಳನ್ನು ೧೧ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಬಹಳಷ್ಟು ಕೆರೆಗಳು ಹೂಳು ತುಂಬಿರುವುದು, ನೀರು ಬರುವ ಕಾಲುವೆಗಳು ಮುಚ್ಚಿ ಹೋಗಿರುವುದು ಹಾಗೂ ತೂಬು ತಿಥಿಲಗೊಂಡು ಕೆರೆ ಏರಿಗಳು ಸಹ ಕುಸಿಯುವ ಹಂತದಲ್ಲಿವೆ. ಇಂಥ ಕೆರೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಈಗ ಮೊದಲ ಹಂತದಲ್ಲಿ ನಾಲ್ಕು ಕೆರೆಗಳಿಗೆ ೧೧ ಕೋಟಿ ರು. ಬಿಡುಗಡೆಯಾಗಿದೆ. ಈ ಕೆರೆಗಳಲ್ಲಿ ಹೂಳು ತೆಗೆಸುವುದು, ಕಲ್ವಟ್ ನಿರ್ಮಾಣ, ತೂಬು ದುರಸ್ತಿ, ಮಳೆ ನೀರು ಹರಿದು ಬರುವ ನಾಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಅದರಂತೆ ಕಾಮಗಾರಿ ನಿರ್ವಹಣೆ ಮಾಡುವಂತೆ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚನೆ ನೀಡಿದರು.ಗ್ರಾಮಸ್ಥರು ಕೆರೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಕೆರೆಗಳು ಮಳೆಗಾಲದಲ್ಲಿ ತುಂಬಿದಷ್ಟು ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತದೆ. ಕೆರೆಗಳು ತುಂಬಿದಷ್ಟು ಊರು ಸಮೃದ್ಧವಾಗುತ್ತದೆ. ಹೀಗಾಗಿ ನಮ್ಮ ಪೂರ್ವಿಕರು ಊರಿಗೊಂದು ಕೆರೆ ನಿರ್ಮಿಸಿಕೊಳ್ಳುತ್ತಿದ್ದರು. ಇವನ್ನು ನಾವು, ನೀವು ಸೇರಿ ಸಂರಕ್ಷಣೆ ಮಾಡಬೇಕಾಗಿದೆ. ಗ್ರಾಮಸ್ಥರು ಕೆರೆ ಉಳಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕಲ್ಪಿಸಿಕೊಡಬೇಕು ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸೋಮೇಶ್ವರ್, ಗ್ರಾಪಂ ಮಾಜಿ ಅಧ್ಯಕ್ಷ ಮಂಗಲ ಶಿವಣ್ಣ, ಪ್ರಕಾಶ್, ಮಂಜುನಾಥ್, ತಾ,ಪಂ ಮಾಜಿ ಸದಸ್ಯ ಎಚ್,ಎಂ, ಮಹದೇವಶೆಟ್ಟಿ, ಮುಖಂಡರಾದ ಮಹೇಶ್ ಕುದರ್, ಹುಲ್ಲೇಪುರ ಕುಮಾರ್‌ಸ್ವಾಮಿ, ಮಹದೇವಸ್ವಾಮಿ, ಮಂಜು, ಮಹೇಶ್, ಬಿ.ಮಲ್ಲೇಶ್, ಬಿ. ಲಿಂಗರಾಜು, ಜೆ. ಮರಿಸ್ವಾಮಿ, ಶಿವಕುಮಾರ್, ಕೆ.ವಿ. ವೆಂಕಟೇಶ್, ಜಯಸ್ವಾಮಿ, ಬಂಗಾರಶೆಟ್ಟಿ, ಅಮಚವಾಡಿ ರಾಜು, ಮಹೇಶ್, ಶಿವಣ್ಣ, ಮಂಜು, ರಾಮು, ಸಣ್ಣ ನೀರಾವರಿ ಇಲಾಖೆ ಎಇಇ ಸಿ.ಎಂ.ಅಭಿಲಾಶ್, ಎಇ ಮಂಜುಳಾ, ಗುತ್ತಿಗೆದಾರ ಭಾಸ್ಕರ್ ಸೇರಿದಂತೆ ಗ್ರಾಮಸ್ಥರು ಮುಖಂಡರು ಇದ್ದರು.