ಕೊರಟಗೆರೆ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ೫೦ ಕೋಟಿ ಅನುದಾನ ತಂದು ರಾಜ್ಯಕ್ಕೆ ಮಾದರಿ ಕ್ಷೇತ್ರ ಮಾಡುವುದೇ ನನ್ನ ಮೊದಲ ಆ್ಯದ್ಯತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ೫೦ ಕೋಟಿ ಅನುದಾನ ತಂದು ರಾಜ್ಯಕ್ಕೆ ಮಾದರಿ ಕ್ಷೇತ್ರ ಮಾಡುವುದೇ ನನ್ನ ಮೊದಲ ಆ್ಯದ್ಯತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ತಾಲೂಕಿನ ಶಾಂತಲಿಂಗಯ್ಯನಪಾಳ್ಯ ಗ್ರಾಮದ ಮುಖ್ಯ ರಸ್ತೆಗೆ ಸುಮಾರು ೬೦ ಲಕ್ಷ ರು. ಕಾಮಗಾರಿ ಉದ್ಘಾಟಿಸಿ ಹಾಗೂ ಬಿ.ಡಿ.ಪುರ ಗ್ರಾಮದಲ್ಲಿ ೪೦ ಲಕ್ಷ ರು.ಗಳ ಗ್ರಾಪಂ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೊರಟಗೆರೆ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ದಶಕಗಳಿಂದ ರಸ್ತೆಗಳು ಅಭಿವೃದ್ದಿ ಹೊಂದಿಲ್ಲ ಎನ್ನುವ ಗ್ರಾಮಸ್ಥರ ಬೇಡಿಕೆಗಳಿಗೆ ಮುಖ್ಯಮಂತ್ರಿಗಳಿಂದ ೫೦ ಕೋಟಿಗಳ ರುಗಳ ವಿಶೇಷ ಅನುದಾನದಲ್ಲಿ ಗ್ರಾಮಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.ತಾಲೂಕಿನ ಜನರ ಬೇಡಿಕೆಯಂತೆ ಈಗಾಗಲೇ ತೋವಿನಕೆರೆ ಹೋಬಳಿ ಕೇಂದ್ರದಲ್ಲಿ ೩೬ ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೊರಟಗೆರೆ ಪಟ್ಟಣದಲ್ಲಿ ೩೨ ಕೋಟಿ ರು.ಗಳ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು ಮಾಡಲಾಗುವುದು. ಕೋಳಾಲ ಹೋಬಳಿ ಕೇಂದ್ರದ ಆಸ್ಪತ್ರೆಯನ್ನು ಉನ್ನತೀಕರಿಸಲಾಗುವುದು. ಈ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಕೊರಟಗೆರೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಮೇಲ್ದೇರ್ಜೆಗೆ ಏರಿಸಲಾಗಿದ್ದು, ಪಟ್ಟಣದ ಬೆಳವಣಿಗೆಗೆ ಸುತ್ತಮುತ್ತಲ ಗ್ರಾಮಗಳನ್ನ ಸೇರಿಸಿಕೊಂಡು ಅಭಿವೃದ್ದಿಗೆ ಹೆಚ್ಚಿನ ಅನುದಾನ ಬರುವಂತೆ ಮಾಡಲಾಗುತ್ತಿದೆ. ಪಟ್ಟಣವು ಅತ್ಯಂತ ಇಕ್ಕಟ್ಟಾದ ಪ್ರದೇಶದಲ್ಲಿ ಜನರು ವಾಸುತ್ತಿದ್ದು, ಈ ಬೆಳವಣಿಗೆಯಿಂದ ಸುತ್ತಮುತ್ತಲ ಪ್ರದೇಶವು ವಾಸ ಸ್ಥಳಕ್ಕೆ ಅಭಿವೃದ್ದಿಗೊಂಡು ಮೂಲಭೂತ ಸೌಕರ್ಯ ಹೆಚ್ಚುವುದಾಗಿ ತಿಳಿಸಿದರು.ಈ ವೇಳೆ ಎಸ್ಪಿ ಕೆ.ವಿ. ಅಶೋಕ್, ಮಧುಗಿರಿ ಎಸಿ ಶಿವಪ್ಪ ಗೋಟೂರು, ತಹಸೀಲ್ದಾರ್ ಮಂಜುನಾಥ್, ಇಒ ಅಪೂರ್ವ, ಗ್ರಾಪಂ ಅಧ್ಯಕ್ಷೆ ಸೌಮ್ಯ, ಪಿಡಿಒ ಲಕ್ಷ್ಮೀನಾರಾಯಣ್, ಮುಖಂಡರಾದ ಅಶ್ವಥ್‌ನಾರಾಯಣ್, ಅರಕೆರೆ ಶಂಕರ್, ಜಯಮ್ಮ, ರಾಜಣ್ಣ, ಕವಿತಾ, ದೇವರಾಜು, ಜಯರಾಮು, ಮಹಾಲಿಂಗಪ್ಪ, ರವಿಕುಮಾರ್, ಹನುಮಂತರಾಜು, ಅಟಿಕನಾಗರಾಜು, ಸೇರಿದಂತೆ ಇತರರಿದ್ದರು.