ಸರ್ಕಾರಿ ವಿವಿಗಳ ಬಲವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಡಾ.ಎಂ.ಸಿ.ಸುಧಾಕರ್

| Published : Sep 14 2024, 01:46 AM IST

ಸರ್ಕಾರಿ ವಿವಿಗಳ ಬಲವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಡಾ.ಎಂ.ಸಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತಿಕ ಪ್ರಪಂಚದಲ್ಲಿ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಸಾಧಿಸಬೇಕಿದೆ. ಇದರ ಜೊತೆಗೆ ವಿಶ್ವವಿದ್ಯಾಲಯದ ಬೋಧಕರಿಗೂ ಸ್ಪೋಕನ್ ಇಂಗ್ಲಿಷ್, ಕಠಿಣ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕುರಿತಂತೆ ತರಬೇತಿ ನೀಡುವ ಯೋಜನೆಯನ್ನು ರೂಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಖಾಸಗಿ, ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಹೊತ್ತಿನಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಬಲವರ್ಧನೆಗೊಳಿಸಲು ವಿಶೇಷ ಒತ್ತು ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ವಿಶ್ವವಿದ್ಯಾಲಯಗಳ ವರ್ಚಸ್ಸು, ಘನತೆ, ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಸರ್ವಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದರು.

ಸ್ನಾತಕ-ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ಪದವಿ ಕೋರ್ಸ್‌ಗಳ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದ್ದೇವೆ. ಈ ವರ್ಷ ೪೫ ಕಾಳೇಜುಗಳಲ್ಲಿ ಪ್ರಾರಂಭಿಸಲಾಗಿದೆ ಎಂದರು.

ಜಾಗತಿಕ ಪ್ರಪಂಚದಲ್ಲಿ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಸಾಧಿಸಬೇಕಿದೆ. ಇದರ ಜೊತೆಗೆ ವಿಶ್ವವಿದ್ಯಾಲಯದ ಬೋಧಕರಿಗೂ ಸ್ಪೋಕನ್ ಇಂಗ್ಲಿಷ್, ಕಠಿಣ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕುರಿತಂತೆ ತರಬೇತಿ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಒಂದು ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ಬೇರೆ ವಿಶ್ವವಿದ್ಯಾಲಯವಾದಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಶಿಕ್ಷಕರು, ಸೌಲಭ್ಯಗಳ ಕೊರತೆ ಎದುರಾಗಲಿವೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಶಕ್ತಿ ಮೀರಿ ವಿಶ್ವವಿದ್ಯಾಲಯಗಳನ್ನು ನಡೆಸಲಾಗುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಐಎಲ್‌ಒ (ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ) ನಡೆಸಿರುವ ಸಮೀಕ್ಷೆ ಪ್ರಕಾರ ಭಾರತದಲ್ಲಿ ಅನಕ್ಷರಸ್ಥರ ಪ್ರಮಾಣ ಶೇ.೩.೫ರಷ್ಟಿದೆ. ಆದರೆ, ಪದವೀಧರ ನಿರುದ್ಯೋಗಿಗಳ ಪ್ರಮಾಣ ಶೇ.೨೯.೫ರಷ್ಟಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಘಟಿಕೋತ್ಸವದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್, ಶೈಕ್ಷಣಿಕ ಮಂಡಳಿ ಸದಸ್ಯ ಮಧು ಜಿ.ಮಾದೇಗೌಡ, ಕುಲಪತಿ ಪ್ರೊ.ಪುಟ್ಟರಾಜು, ಮೌಲ್ಯಮಾಪನ ಕುಲಸಚಿವ (ಪ್ರಭಾರ) ಪ್ರೊ.ಕೆ.ಯೋಗಾನರಸಿಂಹಾಚಾರಿ, ಪ್ರಭಾರ ಕುಲಸಚಿವ ಡಾ.ಎಸ್.ಎಲ್.ಸುರೇಶ್ ಇದ್ದರು.

ಮೂವರು ಗೈರು:

ಮಂಡ್ಯ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ಘಟಿಕೋತ್ಸವ ಸಮಾರಂಭಕ್ಕೆ ಮೂವರು ಪ್ರಧಾನವಾಗಿ ಗೈರು ಹಾಜರಾಗಿದ್ದು ಕಂಡುಬಂದಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ರಾಜ್ಯಪಾಲ ಹಾಗೂ ಮಂಡ್ಯ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಗೈರು ಹಾಜರಾಗಿದ್ದರೇ, ಮೊದಲನೇ ಘಟಿಕೋತ್ಸವದ ಡಾಕ್ಟರೇಟ್ ಪದವಿಗೆ ಪುರಸ್ಕೃತರಾಗಿದ್ದ ಶ್ರೀಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಘಟಿಕೋತ್ಸವಕ್ಕೆ ಬಾರದೆ ಗೈರುಹಾಜರಾಗಿದ್ದರು.

೨೧೫೫ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:

ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಿಂದ ೨೧೫೫ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ನೀಡಲಾಯಿತು. ಸ್ನಾತಕ ವಿಭಾಗದಲ್ಲಿ ೭೩೪ ಮಹಿಳಾ, ೭೩೨ ಪುರುಷರು ಸೇರಿ ೧೪೫೬ ಹಾಗೂ ಸ್ನಾತಕೋತ್ತರ ವಿಭಾಗದಿಂದ ೪೩೮ ಮಹಿಳಾ, ೨೫೧ ಪುರುಷರು ಸೇರಿ ೬೮೯ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಪಡೆದುಕೊಂಡರು. ಪ್ರಥಮ ರ್ಯಾಂಕ್-೪೬, ದ್ವಿತೀಯ-೩೬, ತೃತೀಯ -೧೬ ಸೇರಿ ೯೮ ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡರೆ, ಸ್ನಾತಕ ವಿಭಾಗದಲ್ಲಿ ೪೨ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ೪೮ ಸೇರಿ ೯೦ ವಿದ್ಯಾರ್ಥಿಗಳಿಗೆ ದತ್ತಿ ನಗದು ಬಹುಮಾನ ನೀಡಲಾಯಿತು.