ಸಾರಾಂಶ
ಗುಳಗುಳಿ ಗ್ರಾಪಂನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬರಬೇಕು
ಗಜೇಂದ್ರಗಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗುಳಗುಳಿ ಗ್ರಾಪಂ ಮಾನವ ದಿನಗಳ ಸೃಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಲು ಕ್ರಮವಹಿಸಬೇಕು ಎಂದು ಜಿಪಂ ಜಿಲ್ಲಾ ಐಇಸಿ ಸಂಯೋಜಕ ವಿ.ಎಸ್. ಸಜ್ಜನ್ ಹೇಳಿದರು.
ಸಮೀಪದ ಗುಳಗುಳಿ ಗ್ರಾಮದಲ್ಲಿ ತಾಪಂ ವತಿಯಿಂದ ನರೇಗಾ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಕನಿಷ್ಠ ಪ್ರಗತಿ ಸಾಧಿಸಿರುವ ಕಾರಣ ಸ್ವಸಹಾಯ ಸಂಘಗಳ ಸದಸ್ಯರ ಸಭೆಯಲ್ಲಿ ಮಾತನಾಡಿದರು.ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಮುನ್ನಡೆಗೆ ಬರಬೇಕು. ಕುಟುಂಬದ ಜವಾಬ್ದಾರಿ ಹೊಣೆ ಹೊರಬೇಕು ನಾವು ಯಾರಿಗೂ ಕಡಿಮೆ ಇಲ್ಲ ಸ್ವಾಲಂಬಿ ಜೀವನ ಸಾಗಿಸಬೇಕು ಎನ್ನುವ ದೃಷ್ಠಿಯಿಂದ ಸರ್ಕಾರ ನರೇಗಾದಲ್ಲಿ ಮಹಿಳೆಯರಿಗೆ ಶೇ. ೬೦% ರಷ್ಟು ಮಹಿಳೆಯರನ್ನು ಭಾಗವಹಿಸಬೇಕು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಗುಳಗುಳಿ ಗ್ರಾಪಂನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬರಬೇಕು. ಒಂದು ಜಾಬ್ ಕಾರ್ಡ್ ಗೆ ೧೦೦ ದಿನ ಕೆಲಸವಿರುತ್ತದೆ. ಒಂದು ವರ್ಷದಲ್ಲಿ ನೀವು ೧೦೦ದಿನ ಕೆಲಸ ಪಡೆಯಬೇಕು ಎಂದರು.
ಪಿಡಿಒ ಹುಲ್ಲಪ್ಪ ಹುಲ್ಲೂರು ಮಾತನಾಡಿ, ನರೇಗಾ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತದೆ. ಇಲ್ಲಿ ಯಾರಿಗೂ ತಾರತಮ್ಯ ಇಲ್ಲ. ಪುರುಷರಿಗೆ ಎಷ್ಟು ಕೂಲಿ ಕೊಡುತ್ತೇವೆ ಮಹಿಳೆಯರಿಗೂ ಅಷ್ಟೇ ಕೂಲಿ ಪಾವತಿಯಾಗುತ್ತದೆ. ಮಹಿಳಾ ಕೂಲಿಕಾರರು ಎಲ್ಲರೂ ಕೆಲಸಕ್ಕೆ ಬರಬೇಕು. ಗುಳಗುಳಿ ಪಂಚಾಯತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕಡಿಮೆ ಇರುವ ಕಾರಣ ಮಹಿಳೆಯರಿಗಾಗಿಯೇ ಪ್ರತ್ಯೇಕ ಕೆಲಸ ನೀಡಲಾಗುತ್ತದೆ. ಮಹಿಳೆಯರು ಎಲ್ಲರೂ ನಮೂನೆ ೬ ತುಂಬಿ ಕೊಡಬೇಕು ಎಂದು ತಿಳಿಸಿದರು.ಗ್ರಾಪಂ ಅಧ್ಯಕ್ಷ ಬಸವರಾಜ ಆದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಮಾಣಿಕವಾಗಿ ಕೆಲಸ ಮಾಡಿ ನಿಮಗೆ ಕೆಲಸ ಕೊಡಿಸುವ ಜವಾಬ್ದಾರಿ ನಮ್ಮದು ಎಂದರು.
ಈ ವೇಳೆ ತಾಲೂಕು ಐಇಸಿ ಸಂಯೋಜನಕ ಮಂಜುನಾಥ ಹಳ್ಳದ, ಡಿಇಒ ಮಲ್ಲು, ಬಿಲ್ ಕಲೆಕ್ಟರ್ ಮುತಾರಿ, ಜಿಕೆಎಂ ಮಲ್ಲವ್ವ, ಎಂಬಿಕೆ ಸರಸ್ವತಿ ಹಾಗೂ ಎಸ್.ಬಿ. ಸಂಕನೂರು, ಚನ್ನಬಸಪ್ಪ ಹೂಗಾರ, ಗ್ರಾಪಂ ಸಿಬ್ಬಂದಿಗಳು, ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಸೇರಿ ಕಾಯಕ ಬಂಧುಗಳು, ಮಹಿಳೆಯರು ಇದ್ದರು.