ಸಮಾಜದ ಕನ್ನಡಿ ಮಾಧ್ಯಮಗಳ ಮೇಲೆ ಹೆಚ್ಚಿನ ಹೊಣೆ: ಡಾ.ಪ್ರಭಾ

| Published : Sep 01 2024, 01:57 AM IST

ಸಾರಾಂಶ

ಕನ್ನಡಿಯು ಬಾಹ್ಯ ಸೌಂದರ್ಯವನ್ನಷ್ಟೇ ತೋರಿಸುತ್ತದೆ. ಆದರೆ, ಸುದ್ದಿ ಮಾಧ್ಯಮವು ಸಮಾಜದ ಕನ್ನಡಿಯಾಗಿದ್ದು, ಸಮಾಜದ ಒಳಗು, ಹೊರಗನ್ನು ತೋರಿಸುವ ಸಾಮರ್ಥ್ಯ ಇದಕ್ಕಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

- ವರದಿಗಾರರ ಕೂಟ ವೆಬ್‌ಸೈಟ್‌ ಅನಾವರಣ, ಹಿರಿಯರಿಗೆ ಗೌರವಾರ್ಪಣೆ, ಮಾಧ್ಯಮ ಪ್ರಶಸ್ತಿ ಪ್ರದಾನ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕನ್ನಡಿಯು ಬಾಹ್ಯ ಸೌಂದರ್ಯವನ್ನಷ್ಟೇ ತೋರಿಸುತ್ತದೆ. ಆದರೆ, ಸುದ್ದಿ ಮಾಧ್ಯಮವು ಸಮಾಜದ ಕನ್ನಡಿಯಾಗಿದ್ದು, ಸಮಾಜದ ಒಳಗು, ಹೊರಗನ್ನು ತೋರಿಸುವ ಸಾಮರ್ಥ್ಯ ಇದಕ್ಕಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ, ಮಾಧ್ಯಮ ದಿನಾಚರಣೆ-2024, ಮಾಧ್ಯಮ ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಹಾಗೂ ಕೂಟದ ವೆಬ್‌ಸೈಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದ ಕನ್ನಡಿಯಾದ ಸುದ್ದಿ ಮಾಧ್ಯಮದ ಮೇಲೆ ಸಾಕಷ್ಟು ಜವಾಬ್ದಾರಿ, ಹೊಣೆಗಾರಿಕೆ ಇದೆ ಎಂದರು.

ಸಮಾಜವನ್ನು ಕಟ್ಟುವ ಜವಾಬ್ದಾರಿ ಮಾಧ್ಯಮಗಳು, ಪತ್ರಕರ್ತರ ಮೇಲಿದೆ. ಬ್ರೇಕಿಂಗ್‌ ನ್ಯೂಸ್‌, ಫೇಕ್‌ ನ್ಯೂಸ್ ವಿರುದ್ಧ ಹೋರಾಟ ಮಾಡಬೇಕಾಗಿದೆ. ದೃಶ್ಯ ಮಾಧ್ಯಮಗಳು ಸುದ್ದಿಗಳನ್ನು ಬಿತ್ತರ ಮಾಡಬೇಕೆ ಹೊರತು, ನ್ಯಾಯಾಲಯದಂತೆ ತೀರ್ಪು ನೀಡುವಂತಹ ಹಂತಕ್ಕೆ ಹೋಗಬಾರದು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ ರಂಗ ಎಂಬ ಅರಿವು ಇರಲಿ ಎಂದು ಡಾ.ಪ್ರಭಾ ಹೇಳಿದರು.

ಸಂಪಾದಕೀಯ ಓದುತ್ತೇನೆ:

ಚಿಕ್ಕವಳಿದ್ದಾಗ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಆಗೆಲ್ಲಾ ಮುದ್ರಣ ಮಾಧ್ಯಮಗಳಿಂದಲೇ ಜಗತ್ತಿನ ಆಗುಹೋಗುಗಳನ್ನು ಅರಿಯಬೇಕಾಗಿತ್ತು. ದಿನಪತ್ರಿಕೆಗಳು, ಪತ್ರಿಕೆಯ ಸಂಪಾದಕೀಯ, ವಾರ ಪತ್ರಿಕೆಗಳನ್ನು ಓದಿ, ಬೆಳೆದಿದ್ದೇನೆ. ಶಿಕ್ಷಣ, ಅಧ್ಯಾತ್ಮ, ಆರೋಗ್ಯ, ಜ್ಞಾನ, ವಿಜ್ಞಾನದ ಮಾಹಿತಿಗಳು ಪತ್ರಿಕೆ, ವಾರಪತ್ರಿಕೆಗಳಲ್ಲಿ ಇರುತ್ತಿತ್ತು. ಇಂದಿಗೂ ಪತ್ರಿಕೆಗಳ ಜೊತೆಗೆ ಸಂಪಾದಕೀಯ ಪುಟವನ್ನು ತಪ್ಪದೇ ಓದುತ್ತೇನೆ ಎಂದು ತಮ್ಮ ಓದುವ ಹವ್ಯಾಸದ ಬಗ್ಗೆ ಸಂಸದರು ವಿವರಿಸಿದರು.

ಪತ್ರಕರ್ತರು ಸಮಾಜದ ಸಮಸ್ಯೆಗಳನ್ನು ಬಿಂಬಿಸಬೇಕಿದೆ. ಸಮಾಜದ ಧ್ವನಿಯಾಗಿ ನೀವೆಲ್ಲರೂ ಕೆಲಸ ಮಾಡಬೇಕು. ಇತ್ತೀಚಿನ ಯುವ ಸಮುದಾಯವು ಪತ್ರಿಕೆಗಳನ್ನು, ಪುಸ್ತಕಗಳನ್ನು ಓದುತ್ತಿಲ್ಲ. ಓದಿನ ಆಸಕ್ತಿ ಬೆಳೆಸಿಕೊಂಡರೆ, ಏಕಾಗ್ರತೆ ರೂಢಿಸಿಕೊಳ್ಳಲು ಸಾಧ್ಯ. ಸಾಮಾಜಿಕ ಮಾಧ್ಯಮಗಳು ಮನಸ್ಸನ್ನು ಹಾಳು ಮಾಡಿದರೆ, ಮುದ್ರಣ ಮಾಧ್ಯಮವು ನಮ್ಮ ಪದ ಸಂಪತ್ತನ್ನು ಹೆಚ್ಚಿಸುತ್ತದೆ. ಮುಂಬರುವ ದಿನಗಳಲ್ಲಿ ತಮ್ಮ ಅತ್ತೆ ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಹೆಸರಿನಲ್ಲಿ ಹಿರಿಯ ಪತ್ರಕರ್ತರಿಗೆ, ಪತ್ರಕರ್ತರ ಚಿಕಿತ್ಸೆಗೆ ನೆರವು ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಪತ್ರಕರ್ತರಿಗೆ ನಿವೇಶನ, ವರದಿಗಾರರ ಕೂಟಕ್ಕೆ ಸ್ವಂತ ಜಾಗ, ಕಟ್ಟಡ, ಪತ್ರಕರ್ತರ ಮಕ್ಕಳ ಓದಿಗೆ ತಮ್ಮ ಸಂಸ್ಥೆಯಲ್ಲಿ ಶೈಕ್ಷಣಿಕ ನೆರವು, ಆಸ್ಪತ್ರೆ ವೆಚ್ಚದಲ್ಲಿ ರಿಯಾಯಿತಿ ಹೀಗೆ ಸಾಕಷ್ಟು ವಿಚಾರ ನಮ್ಮ ಗಮನದಲ್ಲೂ ಇದೆ. 17 ವರ್ಷದಿಂದ ಕೂಟ ನಡೆದು ಬಂದ ಹಾದಿ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಿ ದಾವಣಗೆರೆ ಡಿಸ್ಟ್ರಿಕ್‌ ರಿಪೋರ್ಟರ್ಸ್‌ ಗಿಲ್ಡ್‌ (ದಾವಣಗೆರೆ ಜಿಲ್ಲಾ ವರದಿಗಾರರ ಕೂಟ)ನ ವೆಬ್‌ ಸೈಟ್‌ ಅಂದಿನಿಂದ ಈವರೆಗೆ ಕೂಟ ನಡೆದು ಬಂದ ಹಾದಿ ಕಟ್ಟಿಕೊಡುವ ಕೆಲಸ ಹೊಸ ಪದಾಧಿಕಾರಿಗಳು ಮಾಡಿದ್ದು ಶ್ಲಾಘನೀಯವಾಗಿದೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಕೊಂಡಾಡಿದರು.

ದೂಡಾ ವ್ಯಾಪ್ತಿಯಲ್ಲಿ ಸೂರು:

ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿದ ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ವರದಿಗಾರರ ಕೂಟವು ಪತ್ರಕರ್ತರ ಸಂಘಟಿದ ಪ್ರಯತ್ನದ ಫಲವಾಗಿ ಸ್ಥಾಪನೆಯಾದ ಸಂಸ್ಥೆಯಾಗಿದೆ. 17 ವರ್ಷಗಳಲ್ಲಿ ಕೂಟದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲೆ. ಪತ್ರಕರ್ತರ ನಿವೇಶನದ ಬೇಡಿಕೆ ಬಗ್ಗೆ ನಮ್ಮ ಗಮನದಲ್ಲೂ ಇದೆ. ಸದಾ ನಾವು ನಿಮ್ಮೊಂದಿಗೆ ಇರುತ್ತೇವೆ. ವರದಿಗಾರರ ಕೂಟವು ಹಿರಿಯ ಪತ್ರಕರ್ತರು, ನಿವೃತ್ತ ಪತ್ರಕರ್ತರು, ಅನಾರೋಗ್ಯ ಪೀಡಿತರಿಗೆ ಗೌರವಿಸುವ ಮೂಲಕ ಮಾದರಿ ಕೆಲಸ ಮಾಡಿದೆ. ಪತ್ರಕರ್ತರಿಗೆ ಭಾಷೆ ಮುಖ್ಯ. ಕನ್ನಡದಲ್ಲಿ ಪರಿಣತಿ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುವ ಪತ್ರಕರ್ತರಿಗೆ ದೂಡಾ ವ್ಯಾಪ್ತಿಯಲ್ಲಿ ಸೂರು ಕಲ್ಪಿಸಲು ನಾನು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಸಮಾಜವನ್ನು ತಿದ್ದುವ ಕಾರ್ಯ ಪತ್ರಕರ್ತರದ್ದು. ಪ್ರಜಾಪ್ರಭುತ್ವದ ಮೂರೂ ಅಂಗಗಳನ್ನು ಎಚ್ಚರಿಕೆಯಿಂದ ಇಡುವಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ದೊಡ್ಡದು. ಆದರೆ, ಈಚಿನ ಬ್ರೇಕಿಂಗ್ ನ್ಯೂಸ್‌ ಹೆಸರಿನಲ್ಲಿ ಮಾಧ್ಯಮ ಕ್ಷೇತ್ರವೇ ಹಾದಿ ತಪ್ಪುತ್ತಿದೆ. ವಾಸ್ತವ ನೆಲೆಗಟ್ಟಿನಲ್ಲಿ ವರದಿ ಮಾಡುವುದಕ್ಕಿಂತಲೂ ಸುದ್ದಿ ವೈಭವೀಕರಣ ಹೆಚ್ಚುತ್ತಿದೆ. ವರದಿಯಲ್ಲಿ ಕಪೋಲಕಲ್ಪಿತ ಸಂಗತಿಗಳು ರಾರಾಜಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಿರಿಯ ಪತ್ರಕರ್ತರು ಕಿರಿಯರನ್ನು ತಿದ್ದುವ ಕೆಲಸ ಮಾಡಬೇಕು. ಆಗ ಮಾತ್ರ ಈ ಕ್ಷೇತ್ರದಲ್ಲೂ ಬದಲಾವಣೆ ಸಾಧ್ಯವಾದೀತು ಎಂದರು.

ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಕೂಟದ ಗೌರವಾಧ್ಯಕ್ಷ ಬಿ.ಎನ್‌. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಖಜಾಂಚಿ ಪವನ್ ಐರಣಿ, ಪಿಆರ್‌ಒ ಪಿ.ಎಸ್. ಲೋಕೇಶ, ಉಪಾಧ್ಯಕ್ಷರಾದ ಕೆ.ಚಂದ್ರಣ್ಣ, ಮಂಜುನಾಥ ಗೌರಕ್ಕಳವರ, ಎಂ.ಬಿ.ನವೀನ, ಸದಾನಂದ ಹೆಗ್ಡೆ, ರಾಮಪ್ರಸಾದ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು, ಕಾರ್ಯದರ್ಶಿಗಳಾದ ತೇಜಸ್ವಿನಿ ಪ್ರಕಾಶ, ಬಿ.ಸಿಕಂದರ್, ಕೆ.ಎಸ್.ಚನ್ನಬಸಪ್ಪ ಶಂಭು, ಉಮೇಶ ಕಾಡಪ್ಪ, ಮಹೇಶ ಕಾಶೀಪುರ, ಎಚ್.ಟಿ.ರಮೇಶ, ಸುರೇಶ ಕಕ್ಕರಗೊಳ್ಳ, ಶಿವರಾಜ ಬೀದಿಮನಿ, ಡಾ. ಕೆ.ಜೈಮುನಿ, ಬಿ.ಕೆ.ಕಾವ್ಯ, ಎಚ್.ಅನಿತಾ, ರವಿ ಭುವನೇಶ್ವರಿ, ಓ.ಎನ್.ಸಿದ್ದಯ್ಯ ಒಡೆಯರ್‌, ಸುರೇಶ ಕುಣಿಬೆಳಕೆರೆ, ವಿಜಯಕುಮಾರ ಜೈನ್‌, ಎನ್.ನಿಂಗರಾಜ, ಕರಿಬಸವರಾಜ ಇತರರು ಇದ್ದರು.

ವೀರೇಶ್ವರ ಪುಣ್ಯಾಶ್ರಮದ ಮಕ್ಕಳು ವಚನ ಗಾಯನ, ಯುವ ಗಾಯಕ ಚೇತನ್ ಹಾಗೂ ಸರ್ಕಾರಿ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿನಿ ಶೈಲಜಾ ಪ್ರಾರ್ಥನೆ ನಡೆಸಿಕೊಟ್ಟರು. ಗರ್ವಂ ಸುರೇಶ್ ಖ್ಯಾತಿಯ ಸುರೇಶ ಗೌಡ್ರು, ರಾಜ್ಯ ಮಟ್ಟದ ಖೋ ಖೋ ಪಟು ಹಾಸನ ತೀರ್ಥನಾ, ಅನ್ವೇಷಕರು ಆರ್ಟ್ಸ್‌ ಫೌಂಡೇಷನ್‌ನ ಎಸ್.ಎಸ್.ಸಿದ್ದರಾಜು, ವೆಬ್‌ ಸೈಟ್‌ ಡಿಸೈನರ್ ಪುಷ್ಪಾ ವಾಲಿ ಇತರರಿಗೆ ಗೌರವ ಸಮರ್ಪಿಸಲಾಯಿತು.

- - -

ಬಾಕ್ಸ್‌-1 * ಗೌರವ ಸನ್ಮಾನ, ಮಾಧ್ಯಮ ಪ್ರಶಸ್ತಿ ಪ್ರದಾನಹಿರಿಯ ಪತ್ರಕರ್ತರಾದ ವೀರಪ್ಪ ಎಂ.ಭಾವಿ, ಎನ್.ಆರ್.ನಟರಾಜ, ಜಿ.ಎಂ.ಆರ್‌.ಆರಾಧ್ಯ, ಎಂ.ಶಶಿಕುಮಾರ, ಎಸ್.ಎ.ಗಂಗರಾಜು, ಐ.ಗುರುಶಾಂತಪ್ಪ, ಬಸವರಾಜ ಐರಣಿ, ಬಕ್ಕೇಶ ನಾಗನೂರುರಿಗೆ ಜೀವಮಾನ ಸಾದನೆಗಾಗಿ ಗೌರವ ಸನ್ಮಾನ ಹಾಗೂ ಗಣೇಶ ಕಮಲಾಪುರ, ವಿನಾಯಕ ನಾಯ್ಕ ಪೂಜಾರ, ದೇವಿಕಾ ಸುನಿಲ್‌, ಕೆ.ಆರ್‌.ಪುನೀತ್ ಆಪ್ತಿ, ಬಿ.ಹನುಮಂತರಾವ್‌, ಎಚ್.ನಿಂಗರಾಜ, ಚನ್ನಬಸವ ಶೀಲವಂತ, ಎ.ಬಿ.ರುದ್ರಮ್ಮ ಅವರಿಗೆ ವಾರ್ಷಿಕ ಮಾಧ್ಯಮ ಪ್ರಶಸ್ತಿ ನೀಡಿ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಬಿ.ಪಿ.ಹರೀಶ, ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ, ವಿನಾಯಕ ಪೈಲ್ವಾನ್ ನಡೆಸಿಕೊಟ್ಟರು.

- - - ಕೋಟ್‌ ವರದಿಗಾರರ ಕೂಟಕ್ಕೆ ಜಾಗ, ಸ್ವಂತ ಕಟ್ಟಡ ಕಲ್ಪಿಸಲು ಹಾಗೂ ಪತ್ರಕರ್ತರಿಗೆ ದೂಡಾ, ಸರ್ಕಾರದಿಂದ ನಿವೇಶನ ಒದಗಿಸುವ ಬಗ್ಗೆ ಮಾವನವರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಬಳಿ ನಿಮ್ಮ ಪರವಾಗಿ ಮಾತನಾಡಿ, ಆದಷ್ಟು ಬೇಗನೆ ಇವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತೇನೆ

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ

- - - (ಫೋಟೋ ಇದೆ)