ದುರಾಸೆಯಿಂದ ಶಾಂತಿ ಸೌಹಾರ್ದತೆ ನಾಶ: ಹೆಗ್ಡೆ

| Published : Feb 26 2024, 01:36 AM IST

ಸಾರಾಂಶ

ಡಿಜಿಟಲ್ ತಜ್ಞ ಡಾ. ಶಂಕರ ಕೆ. ಪ್ರಸಾದ್ ಮತ್ತು ಪತ್ರಕರ್ತ ನೆತ್ರಕೆರೆ ಉದಯ ಶಂಕರ ವಿರಚಿತ ‘ಬೆಂಗಳೂರಿನ ಭೂಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕ ಲೋಕಾರ್ಪಣೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದ್ದೇವೆ. ಆದರೆ, ದುರಾಸೆಯಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನಾಶವಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್‌ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಿಜಿಟಲ್ ತಜ್ಞ ಡಾ. ಶಂಕರ ಕೆ. ಪ್ರಸಾದ್ ಮತ್ತು ಪತ್ರಕರ್ತ ನೆತ್ರಕೆರೆ ಉದಯ ಶಂಕರ ವಿರಚಿತ ‘ಬೆಂಗಳೂರಿನ ಭೂಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕವನ್ನು ಆನ್ ಲೈನ್‌ ಮೂಲಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ತೃಪ್ತಿ ಮತ್ತು ಮಾನವೀಯತೆ ಅಳವಡಿಸಿಕೊಳ್ಳುವುದೊಂದೇ ದಾರಿ. ಹಿಂದೆ ಹಿರಿಯರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮೌಲ್ಯಗಳನ್ನುಹೇಳಿಕೊಡುತ್ತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಿದ್ದರು. ಅಂತಹ ಮೌಲ್ಯ ಆಗ ಇತ್ತು. ಆದರೆ ಇಂದು ಪ್ರಾಮಾಣಿಕತೆ ಉಳಿದಿಲ್ಲ. ಶ್ರೀಮಂತಿಕೆಯ ಪೂಜೆ ನಡೆಸುವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ತಪ್ಪೆಸಗಿದ ವ್ಯಕ್ತಿ ಜೈಲಿಗೆ ಹೋಗಿ ಹೊರಕ್ಕೆಬಂದರೆ ಅವರಿಗೆ ಅಪೂರ್ವ ಸ್ವಾಗತ ನೀಡಲಾಗುತ್ತಿದೆ ಎಂದು ವಿಷಾದಿಸಿದರು.

ವ್ಯಕ್ತಿ ಶ್ರೀಮಂತನಾಗುವುದು ತಪ್ಪಲ್ಲ. ಆದರೆ, ಅಕ್ರಮ ಎಸಗಿ ಸಂಪಾದಿಸ ಬಾರದು. ಅಂತಹ ಸಂಪತ್ತು ಉಳಿಯುವುದಿಲ್ಲ ಎಂದರು.

ಚಾಣಕ್ಯ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಸದಾನಂದ ಜಾನೆಕೆರೆ ಮಾತನಾಡಿ, ಜನಹಿತಕ್ಕಾಗಿ ಶ್ರಮಿಸಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಪುಸ್ತಕ ಬಿಡಿಸಿ ಇಡುತ್ತಿದೆ. ಯುವಕರು, ವಿಶೇಷವಾಗಿ ಸಮಾಜ ಶಾಸ್ತ್ರ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ವಿಚಾರಗಳು ಪುಸ್ತಕದಲ್ಲಿವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗಕ್ಕೆ ಜನಹಿತ ಸಾಧನೆಗಾಗಿ ತಮ್ಮದೇಯಾದ ಕೆಲಸಗಳಿವೆ. ಅವುಗಳ ಜಾರಿಗಾಗಿ ಕಾನೂನುಗಳಿವೆ. ಆದರೆ, ಈವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ಇರುವವರು ತಮ್ಮ ಸ್ವಹಿತಾಸಕ್ತಿ ಬೆಳೆಸಿಕೊಂಡು ಅದರ ಪೋಷಣೆಗಾಗಿ ಕಾನೂನುಗಳನ್ನೇ ಹೇಗೆ ತಿರುಚುತ್ತಾರೆ ಎಂಬುದರ ಒಳನೋಟವನ್ನು ಪುಸ್ತಕ ನೀಡುತ್ತಿದೆ ಎಂದು ಹೇಳಿದರು.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್ ಮಾತನಾಡಿ, ಭ್ರಷ್ಟಾಚಾರ ನಿಯಂತ್ರಿಸಲು ಇರುವುದು ಒಂದೇದಾರಿ ಎಂದರೆ, ಲಂಚ ಕೊಡುವುದಿಲ್ಲ ಮತ್ತು ಇತರರಿಂದ ತೆಗೆದು ಕೊಳ್ಳುವುದಿಲ್ಲ ಎಂಬುದಾಗಿ ಎಂದರು. ಹಿರಿಯರು ನಿರ್ಧಾರ ಮಾಡುವುದು ಮತ್ತು ಮಕ್ಕಳಿಗೆ ಇಂತಹ ಮೌಲ್ಯಗಳನ್ನು ಶಾಲಾಮಟ್ಟದಿಂದಲೇ ಕಲಿಸಿ ಕೊಡಬೇಕು ಎಂದು ಹೇಳಿದರು.

ನಿವೃತ್ತ ನ್ಯಾಯಾಧೀಶ ಪ್ರಾಣೇಶ್, ನಿವೃತ್ತ ನ್ಯಾಯ ಮೂರ್ತಿ ಗುಣಶೇಖರ ನಾಯ್ಡು, ವಾಸುಕಿ ರಮೇಶ್, ಅಮರನಾಥ್, ನಾಗೇಶ್, ಚಿತ್ರನಟ ಅರುಣ ಕುಮಾರ್, ಲೇಖಕರಾದ ಡಾ। ಶಂಕರ ಕೆ.ಪ್ರಸಾದ್ ಮತ್ತು ನೆತ್ರಕೆರೆ ಉದಯಶಂಕರ ಇದ್ದರು.